ಉತ್ತಮ ನಿದ್ರೆ ಎಲ್ಲರಿಗೂ ಅಚ್ಚು-ಮೆಚ್ಚು. ನಿದ್ರೆ ಚೆನ್ನಾಗಿದ್ದರೆ ಬೇರೆ ಎಲ್ಲಾ ಕೆಲಸ ಹುಮ್ಮಸ್ಸಿನಿಂದ ಮಾಡಬಹುದು. ಚೆನ್ನಾಗಿ ನಿದ್ರೆ ಮಾಡದೇ ಹೋದರೆ ಮಾನಸಿಕ ಹಾಗು ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.
Advertisement
ಅದು ಉತ್ಪಾದಕತೆ, ಭಾವನಾತ್ಮಕ ಸಮತೋಲನ ಮತ್ತು ತೂಕದ ಮೇಲೂ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ನಮ್ಮಲ್ಲಿ ಕೆಲವರು ರಾತ್ರಿಯ ಸಮಯದಲ್ಲಿ ಮೊಬೈಲ್, ಟಿ.ವಿ ಎಂದೆಲ್ಲಾ ತಮ್ಮ ನಿದ್ರೆಯನ್ನು ಕಡೆಗಣಿಸುತ್ತಿರುತ್ತಾರೆ.
ಅದರಲ್ಲಿಯೂ ರಾತ್ರಿ ಸಮಯದಲ್ಲಿ ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಬರುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾದರೆ ಅಸಮರ್ಪಕ ನಿದ್ರೆಯಿಂದ ದೇಹಕ್ಕೆ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಇದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಸಮಸ್ಯೆಗಳು ಕೂಡ ಉಂಟಾಗಬಹುದು.
- ಕಡಿಮೆ ನಿದ್ರೆ ಮಾಡುವುದರಿಂದ ಸ್ಮರಣ ಶಕ್ತಿ ಕಡಿಮೆಯಾಗುತ್ತದೆ. ನಿದ್ರಾಹೀನತೆಯು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಏಕಾಗ್ರತೆ ಕಡಿಮೆಯಾಗುವ ಅಪಾಯವೂ ಇದೆ.
- ಸಾಕಷ್ಟು ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಸೋಂಕುಗಳು ಸಹ ವೇಗವಾಗಿ ಹರಡುತ್ತವೆ. ಅದಕ್ಕಾಗಿಯೇ ದಿನಕ್ಕೆ ಎಂಟು ಗಂಟೆಗಳ ನಿದ್ರೆ ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
- ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳು ಅಸ್ಥಿರವಾಗುತ್ತವೆ. ಇದು ಆಹಾರ ಸೇವನೆಯನ್ನು ಹೆಚ್ಚಿಸುತ್ತದೆ ಮತ್ತು ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ.
- ನಿದ್ರೆಯ ಕೊರತೆಯು ಇನ್ಸುಲಿನ್ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
- ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಒತ್ತಡ, ಆತಂಕ ಮತ್ತು ಖಿನ್ನತೆ ಉಂಟಾಗುತ್ತದೆ.
- ಅಗತ್ಯಕ್ಕಿಂತ ಕಡಿಮೆ ನಿದ್ರೆ ಮಾಡುವುದರಿಂದ ಮುಖದ ಅಂದ ಹಾಳಾಗುತ್ತದೆ. ಇದು ಸುಕ್ಕುಗಳು ಮತ್ತು ಕಪ್ಪು ವರ್ತುಲಗಳಿಗೂ ಕಾರಣವಾಗುತ್ತದೆ.
- ಸಾಕಷ್ಟು ನಿದ್ರೆ ಮಾಡದಿರುವುದು ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.