ವಿಜಯಸಾಕ್ಷಿ ಸುದ್ದಿ, ಗದಗ
ಹಣ್ಣಿನ ವ್ಯಾಪಾರಿಯೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ ಘಟನೆ ಗದಗನಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಗರದ ತೀಸ್ ಬಿಲ್ಡಿಂಗ್ ಬಳಿ ಈ ದುರ್ಘಟನೆ ನಡೆದಿದ್ದು, ಬ್ಯಾಂಕ್ ರಸ್ತೆಯ ಅಯೋಧ್ಯಾ ಹೋಟೆಲ್ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಬೆಟಗೇರಿಯ ವಿವೇಕಾನಂದ ರಸ್ತೆಯ ನಿವಾಸಿ ಗುಂಡಪ್ಪ ಚಲವಾದಿ ಅಲಿಯಾಸ್ ಮುತ್ತು ಚಲವಾದಿ (28) ಎಂಬಾತ ಕೊಲೆಗೀಡಾದ ಯುವಕ.
ಹರಿತವಾದ ಚಾಕುವಿನಿಂದ ಸಿಕ್ಕ ಸಿಕ್ಕಲ್ಲಿ ಇರಿಯಲಾಗಿದೆ. ಕತ್ತು, ತಲೆ, ಎದೆ ಹಾಗೂ ಹೊಟ್ಟೆಯ ಬಾಗಕ್ಕೆ ಹಲವು ಬಾರಿ ಇರಿದಿದ್ದರಿಂದ ಕರುಳು ಹೊರಬಿದ್ದಿದ್ದು, ಕೊಲೆಗಡುಕರ ರಾಕ್ಷಸಿ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಸ್ನೇಹಿತರೇ ರಾತ್ರಿ ಮುತ್ತು ಚಲವಾದಿಯನ್ನು ಪಾರ್ಟಿ ಮಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಹಣಕಾಸಿನ ವಿಚಾರವಾಗಿ ಕೊಲೆಯಾಗಿದೆಯೋ? ಅಥವಾ ಮೀಟರ್ ಬಡ್ಡಿ ಮಾಫಿಯಾ ಕೂಡ ಕಾರಣ ಇರಬಹುದು ಎಂದು ಕೆಲ ವ್ಯಾಪಾರಸ್ಥರು ಮಾಹಿತಿ ನೀಡಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಇನ್ಸ್‌ಪೆಕ್ಟರ್ ಗಳಾದ ಸಾಲಿಮಠ ಹಾಗೂ ಸುಬ್ಬಾಪೂರಮಠ, ನಗರ ಠಾಣೆಯ ಪಿಎಸ್ಐ ಜಕ್ಕಲಿ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.