ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಗಂಭೀರ ಪ್ರಶ್ನೆ ರಾಜ್ಯದ ಜನತೆಯ ಮನಸ್ಸಿನಲ್ಲಿ ಮೂಡುತ್ತಿದೆ. ಏಕೆಂದರೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯ ಏರಿಕೆಯು ಆತಂಕಕಾರಿಯಾಗಿದೆ. ಮೊನ್ನೆಯಷ್ಟೆ ಮೈಸೂರು ದಸರಾ ಸಂಭ್ರಮದ ನಡುವೆ ನಡೆದ ಪೈಶಾಚಿಕ ಘಟನೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ಮೂಲದ ಸಿಕಂದರ್ ಬಾಬಾ ಹಾಗೂ ಜನಾರ್ಧನಾಚಾರಿ ಎಂದು ಗುರುತಿಸಲಾಗಿದ್ದು, ಸದ್ಯ ಸಂತ್ರಸ್ತ ಯುವತಿಗೆ ಮಹಿಳಾ ಸ್ವಾದಾರ ಕೇಂದ್ರದಲ್ಲಿ ಆರೈಕೆ ನೀಡಲಾಗುತ್ತಿದೆ.
ಘಟನೆ ನಡೆದ ದಿನ ಸಂತ್ರಸ್ತ ಯುವತಿ ಕೆಲಸ ಹುಡುಕಿಕೊಂಡು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ಬಳಿಕ ವಾಪಸ್ ನಡೆದುಕೊಂಡು ಮಂಚೇನಹಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಆರೋಪಿ ಸಿಕಂದರ್ ಬಂದು, ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್ ಹತ್ತಿಸಿಕೊಂಡಿದ್ದ. ಬಳಿಕ ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಆನಂತರ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ತನ್ನ ಸ್ನೇಹಿತ ಜನಾರ್ಧನ್ ಅನ್ನು ಅದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.



