ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದ್ದರಿಂದ ಜಮೀನಿನಲ್ಲಿ ಕಳೆದ ಒಂದು ತಿಂಗಳಿಂದ ಕಿತ್ತು ಹಾಕಿದ್ದ ಈರುಳ್ಳಿ ಫಸಲನ್ನು ಇಲ್ಲಿಯ ರೈತನೊಬ್ಬ ಹರಗಿ ತನ್ನ ನೋವನ್ನು ತೋಡಿಕೊಂಡಿದ್ದಾನೆ.
ಇಲ್ಲಿಯ ಪಾಪನಾಶಿ ರಸ್ತೆಗೆ ಹೊಂದಿರುವ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದ ರೈತ ಕರಿಯಪ್ಪ ತಿಮ್ಮಾಪೂರ ದರ ಕುಸಿತದಿಂದ ಟ್ರ್ಯಾಕ್ಟರ್ ಮೂಲಕ ಹರಗಿ ಜಮೀನಿನಲ್ಲಿ ಗೊಬ್ಬರವಾಗಲು ಬಿಟ್ಟಿದ್ದಾನೆ. ಇದಕ್ಕೂ ಪೂರ್ವ ಕಿತ್ತುಹಾಕಿರುವ ಉಳ್ಳಾಗಡ್ಡಿಯನ್ನು ಕುರಿ ಮೇಯಲು ಬಿಟ್ಟಿದ್ದನ್ನು ನೋಡಿ ರೈತನಿಗೆ ಆಗಿರುವ ನಷ್ಟ ಕಂಡು ರಸ್ತೆಯಲ್ಲಿ ಹೋಗುವವರು ಮಮ್ಮಲ ಮರುಗಿದ್ದಾರೆ.
ಉಳುಮೆ, ಬೀಜ, ಗೊಬ್ಬರ, ಔಷಧಿ, ಆಳು ಸೇರಿ 75 ಸಾವಿರ ರೂ ಖರ್ಚು ಮಾಡಿರುವ ರೈತ ದರ ಕುಸಿತದಿಂದ ಫಸಲನ್ನು ಹರಗಿದ್ದಾನೆ. ಮಾರುಕಟ್ಟೆಯಲ್ಲಿ ಈಗ ಕ್ವಿಂಟಲ್‌ಗೆ 200-300 ರೂ ಮಾತ್ರ ದರವಿದೆ. ಕಿತ್ತು ಹಾಕಿರುವ ಈರುಳ್ಳಿಯನ್ನು ರಾಶಿ ಮಾಡಿ ಚೀಲ ತುಂಬಿ ಮಾರುಕಟ್ಟೆಗೆ ಹೋದರೆ ನಷ್ಟವೇ ಅಧಿಕವಾಗುತ್ತದೆ ಎಂಬುದನ್ನು ಅರಿತು ಜಮೀನಿನಲ್ಲಿಯೇ ಗೊಬ್ಬರವನ್ನಾಗಿ ಮಾಡಲು ಹರಗಿದ್ದೇನೆ. ಆದ್ದರಿಂದ ಸರ್ಕಾರ ಪರಿಹಾರ ನೀಡಬೇಕೆಂದು ರೈತ ಕರಿಯಪ್ಪ ತಿಮ್ಮಾಪೂರ, ಸುರೇಶ ಅಬ್ಬಿಗೇರಿ ಒತ್ತಾಯಿಸಿದ್ದಾರೆ.