ಬೆಂಗಳೂರು: ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ವೈದ್ಯೆಯನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಾ. ಮಹೇಂದ್ರ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಡಾ.ಕೃತಿಕಾರೆಡ್ಡಿ ಸಾವನ್ನಪ್ಪಿದ ದುರ್ಧೈವಿಯಾಗಿದ್ದಾಳೆ.
ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ 26ರಂದು ಎರಡು ಕುಟುಂಬಗಳ ಒಪ್ಪಂದಂತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೃತಿಕಾ ಡೆರ್ಮೆಟಾಲಜಿಸ್ಟ್ ಆಗಿದ್ದರೇ, ಈಕೆಯ ಗಂಡ ಡಾ ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ ಆಗಿದ್ದರು. ಮೃತ ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆ ಇತ್ತು. ಆದರೆ ಇದನ್ನು ಮುಚ್ಚಿಟ್ಟು ಮನೆಯವರು ಮದುವೆ ಮಾಡಿದ್ದರು ಎನ್ನುವ ಆರೋಪ ಇದೆ.
ಆದರೆ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಪ್ಲ್ಯಾನ್ ಮಾಡಿದ್ದ. ಹುಷಾರಿಲ್ಲದೆ ತವರುಮನೆಯಲ್ಲಿ ವೈದ್ಯೆ ಡಾ.ಕೃತಿಕಾರೆಡ್ಡಿ ಮಲಗಿದ್ದ ವೇಳೆ ಅಲ್ಲಿಗೆ ಬಂದಿದ್ದ ಈತ ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದರು.
ಘಟನೆ ಬಳಿಕ ಆಸ್ಪತ್ರೆಯಿಂದ ಡೆತ್ ಮೆಮೊ ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೂರು ನೀಡುವಂತೆ ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಇದು ಸಹಜ ಸಾವು ಎಂದು ನಂಬಿದ್ದ ಕುಟುಂಬ ದೂರು ನೀಡಲು ಹಿಂದೇಟು ಹಾಕಿತ್ತು. ಈ ವೇಳೆ, ಮಾರತ್ ಹಳ್ಳಿ ಪೊಲೀಸರು ಕುಟುಂಬದಿಂದ ದೂರು ಪಡೆದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು.
ಆರು ತಿಂಗಳ ಬಳಿಕ ಬಂದ ಎಫ್‌ಎಸ್‌ಎಲ್ ವರದಿಯಲ್ಲಿ, ಮೃತಳ ದೇಹದಲ್ಲಿ ಅನಸ್ತೇಶಿಯಾ ಅಂಶಗಳು ಕಂಡುಬಂದಿದ್ದು, ಸಾವಿಗೆ ಇದೇ ಕಾರಣ ಎಂದು ಖಚಿತಪಡಿಸಲಾಗಿದೆ. ವರದಿ ಆಧರಿಸಿ, ಯುಡಿಆರ್ ಆಗಿದ್ದ ಪ್ರಕರಣವನ್ನು ಕೊಲೆ ಎಂದು ಪರಿವರ್ತಿಸಿ ಮಾರತ್ ಹಳ್ಳಿ ಪೊಲೀಸರು ಕೇಸ್ ದಾಖಲಿಸಿದರು. ಸದ್ಯ ಬೆಂಗಳೂರಿನಿಂದ ಮಣಿಪಾಲಕ್ಕೆ ಹೋಗಿದ್ದ ಮಹೇಂದ್ರ ರೆಡ್ಡಿಯನ್ನು ಪತ್ನಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.