HomeKarnataka Newsಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ: ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ನವೆಂಬರ್ 1 ನೇ‌ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ.‌ ಆಸ್ತಿ ಶುದ್ಧೀಕರಣಕ್ಕೆ ನಾಂದಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‌ಅವರು ಹೇಳಿದರು.

ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ ಲೈನ್ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ರವರು ವಿಧಾನಸೌಧದಲ್ಲಿ ಬುಧವಾರ ಚಾಲನೆ ನೀಡಿ, ಮಾತನಾಡಿದರು.

“2 ಸಾವಿರ ಚ.ಮೀ. ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ” ಎಂದು ಮಾಹಿತಿ ನೀಡಿದರು.

“ಆಸ್ತಿ ಮಾಲೀಕರು ಸದರಿ ಆಸ್ತಿಯ ಗೈಡೆನ್ಸ್ ದರದ ಶೇ.‌5 ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಇಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ಒಳಚರಂಡಿ ಸೇರಿದಂತೆ ಇತರೇ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದ ಗೈಡೆನ್ಸ್ ದರದ ಶೇ.5 ರಷ್ಟು ‌ಮಾತ್ರ ಶುಲ್ಕ ವಿಧಿಸಲಾಗಿದೆ.‌ 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ.‌ ಹೆಚ್ಚುವರಿ ಶುಲ್ಕದ ಪ್ರಮಾಣ ಆನಂತರ ತಿಳಿಸಲಾಗುವುದು” ಎಂದರು.

“ಪ್ರತಿ ಪಾಲಿಕೆಯು ಎರಡೆರಡು ಸ್ಥಳಗಳಲ್ಲಿ ‘ಹೆಲ್ಪ್ ಡೆಸ್ಕ್’ (ಕಚೇರಿ) ಗಳನ್ನು ತೆಗೆಯಲಾಗುವುದು. ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿಯಾಗಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾರೂ ಸಹ ಒಂದೇ ಒಂದು ರೂಪಾಯಿ ಲಂಚ ನೀಡುವಂತಿಲ್ಲ” ಎಂದರು.

“ಓಸಿ, ಸಿಸಿಗೂ ಇದಕ್ಕೂ ಸಂಬಂಧವಿಲ್ಲ. ಬಿ ಖಾತಾ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸಧ್ಯಕ್ಕೆ ದೊರೆಯುವುದಿಲ್ಲ. ಬಿ ಖಾತಾ ಬಹುಮಹಡಿ ಕಟ್ಟಡಗಳು ಎ‌ ಖಾತೆಗಳಾಗಿ ಬದಲಾವಣೆ ಆಗುವುದಿಲ್ಲ. ಮೊದಲು ಭೂಮಿಗೆ ನಾವು ಖಾತೆ ನೀಡುತ್ತೇವೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂದು ಮೊದಲು ನೋಡುತ್ತೇವೆ. ಆನಂತರ ಕಟ್ಟಡ ಅದಕ್ಕೆ ಏನು ಶುಲ್ಕ ಎಂದು ನಿಗಧಿ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ‌ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದರು.

“ಅರ್ಜಿ ಹಾಕಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನ ನಿಲ್ಲಿಸಿ ವಿಡಿಯೋ, ಫೋಟೊ ದಾಖಲೀಕರಣ ಮಾಡಿ ಅಪ್‌ ಲೋಡ್ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಜಾಗ ಇಲ್ಲಿ ಒಳಪಡುವುದಿಲ್ಲ” ಎಂದರು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ:

“ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲ್ಲರಿಗೂ ಒಂದೇ ರೀತಿ ಖಾತ ನೀಡಲು ಮುಂದಾಗಿದ್ದೇವೆ. ಮೊದಲು ನಾವು ಇ ಖಾತಾ ನೀಡಲು ಆರಂಭಿಸಿದೆವು. ಇಲ್ಲಿ ಎದುರಿಸಿದ ಅಡಚಣೆಗಳನ್ನು ಸರಿಪಡಿಸಿದ್ದೇವೆ. ಆಸ್ತಿಗಳ ದಾಖಲೆ ಡಿಜಿಟಲೀಕರಣ ಮಾಡಲು ಸ್ಕ್ಯಾನ್ ಮಾಡಿದ್ದೇವೆ. ಆನ್ ಲೈನ್ ಖಾತಾ ವ್ಯವಸ್ಥೆ ತಂದಿದ್ದೇವೆ. ಇದೆಲ್ಲದರ ನಂತರ ನಾವು ಈ ಖಾತಾ ಪರಿವರ್ತನೆ ಮಾಡುತ್ತಿದ್ದೇವೆ. ಕಳೆದ 50 ವರ್ಷಗಳಿಂದ ಇಂತಹ ತೀರ್ಮಾನ ಆಗಿರಲಿಲ್ಲ. ನಮ್ಮ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಇದು ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ನಿಮ್ಮ ಆಸ್ತಿ, ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ನಾವು ಸರಿಪಡಿಸುತ್ತಿದ್ದೇವೆ” ಎಂದು ತಿಳಿಸಿದರು.

“ಜಿಬಿಎ ವ್ಯಾಪ್ತಿಯಲ್ಲಿನ ಐದು ಪಾಲಿಕೆಗಳಲ್ಲಿರುವ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ನಂತರ ಬೆಂಗಳೂರಿನ ನಾಗರೀಕರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಮುಂದಾಗಿದೆ. ನಗರದಲ್ಲಿ 25 ಲಕ್ಷ‌‌‌ ಆಸ್ತಿಗಳಿದ್ದು, ಇದರಲ್ಲಿ 7.5 ಲಕ್ಷ‌‌ ಎ‌ ಖಾತೆಗಳು, 7.5 ಲಕ್ಷ‌ ಆಸ್ತಿಗಳು ಬಿ ಖಾತೆ ಹೊಂದಿವೆ. ಇನ್ನು 7-8 ಲಕ್ಷ‌ ಆಸ್ತಿಗಳು ಬಿ ಖಾತೆ ಪಡೆಯಲೂ ಅನುಮೋದನೆ ಪಡೆದಿಲ್ಲ. ಈ ಕಾರ್ಯಕ್ರಮದ ಮೂಲಕ ಜನರ ಆಸ್ತಿ ದಾಖಲೆಗಳನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ 6ನೇ ಗ್ಯಾರಂಟಿ ನೀಡುತ್ತಿದೆ” ಎಂದು ತಿಳಿಸಿದರು.

ನಿವೇಶನಗಳಿಗೆ ಮಾತ್ರ ಎ ಖಾತೆ, ಕಟ್ಟಡಗಳ ಸಕ್ರಮವಿಲ್ಲ

“ಕೆಟಿಸಿಪಿ ಕಾಯ್ದೆ 61 ರ ಅಡಿಯಲ್ಲಿ ಅನುಮೋದನೆಗೊಂಡ‌ ಕಂದಾಯ ಜಮೀನಿನಲ್ಲಿ ಇರುವ ನಿವೇಶನಗಳು. ಅಂದರೆ ಈ ಭೂಮಿಯಲ್ಲಿ ಒಂದಷ್ಟು ‌ಜನರು ಭೂ ಪರಿವರ್ತನೆ ಮಾಡಿಕೊಳ್ಳದೆ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ, ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಿತ್ತು. ಸರ್ಕಾರದ ಈ ಕ್ರಮದಿಂದ ಜನರಿಗೆ ಈ ಪರದಾಟ ತಪ್ಪಲಿದೆ. ನಾವು ಈ ನಿವೇಶನಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗ ಕೈಹಾಕುತ್ತಿಲ್ಲ” ಎಂದು ಹೇಳಿದರು.

“ನಾವು ಮೊದಲನೆಯದಾಗಿ ಕಂದಾಯ ಜಮೀನಿನಲ್ಲಿ ಇರುವ ಎಲ್ಲಾ ಬಡಾವಣೆ ರಸ್ತೆಗಳನ್ನು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿದ್ದೇವೆ. ಏಕೆಂದರೆ ಜಮೀನಿನ ಮಾಲೀಕರು ಎರಡಕ್ಕಿಂತ ಹೆಚ್ಚು ಖರೀದಿದಾರರಿಗೆ ನಿವೇಶನ ನೋಂದಣಿ ಮಾಡಿಸಿ ದೋಖಾ ಮಾಡುತ್ತಿದ್ದರು.‌ ಇದನ್ನು ತಪ್ಪಿಸಲು ಕಳೆದ ವಿಧಾನಸಭಾ ಅಧಿವೇಶನದಲ್ಲಿಯೇ ಈ ತೀರ್ಮಾನ ‌ತೆಗೆದುಕೊಳ್ಳಲಾಯಿತು” ಎಂದರು.

“ನಗರ ಯೋಜನಾ ಪ್ರಾಧಿಕಾರವಾಗಿ ಬಿಡಿಎ ನಿರ್ವಹಣೆ ಮಾಡುತ್ತಿದ್ದ ಕೆಲಸವನ್ನು ಇನ್ನುಮುಂದೆ ಜಿಬಿಎ ನಿರ್ವಹಿಸಲಿದೆ. ಇಲ್ಲಿ ಏಕಗವಾಕ್ಷಿ ಯೋಜನೆ ತಂದಿದ್ದೇವೆ. ಆಮೂಲಕ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಿದ್ದೇವೆ. ಅಲಿನೇಷನ್ ಹಣವನ್ನು ನಾವೇ ತೆಗೆದುಕೊಂಡು ಕಂದಾಯ ಇಲಾಖೆಗೆ ಪಾವತಿ ಮಾಡುವುದು. ಆನಂತರ ನಮ್ಮ ಶುಲ್ಕವನ್ನು ಪಡೆಯುವುದು ಎಲ್ಲವೂ ಒಂದೇ ಕಡೆ ನಡೆಯುತ್ತದೆ. ಕಳೆದ 50 ವರ್ಷಗಳಿಂದ ಯಾರೂ ಮಾಡದ ಕೆಲಸವನ್ನು ಈಗ ಮಾಡಲಾಗುತ್ತಿದೆ” ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!