ಬೆಂಬಲ ಬೆಲೆಯ ನಿರೀಕ್ಷೆಯಲ್ಲಿ ರೈತ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಧ್ಯ ಮಳೆರಾಯ ಬಿಡುವು ನೀಡಿದ್ದು, ತಾಲೂಕಿನಾದ್ಯಂತ ಗೋವಿನಜೋಳದ ಒಕ್ಕಣಿ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಗೋವಿನಜೋಳದ ಮಾರಾಟ ನಡೆಯಬೇಕಾಗಿತ್ತು. ಆದರೆ ಸತತ ಮಳೆಯಿಂದಾಗಿ ಒಕ್ಕಣಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಬಿಸಿಲು ಬೀಳುತ್ತಿರುವುದರಿಂದ ಒಕ್ಕಣಿಗೆ ಅನುಕೂಲವಾಗಿದೆ.

Advertisement

ಪ್ರಸ್ತುತ ವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಗೋವಿನಜೋಳದ ಬಿತ್ತನೆ ಮಾಡಿದ್ದಾರೆ. ಉತ್ತಮ ತೇವಾಂಶದಿಂದಾಗಿ ಬೆಳೆಯೂ ಚೆನ್ನಾಗಿ ಬಂದಿದೆ. ಎರಡು-ಮೂರು ವಾರಗಳ ಹಿಂದೆ ಆಗಾಗ ಮಳೆ ಸುರಿಯಲು ಆರಂಭಿಸಿದ್ದರಿಂದ ಒಕ್ಕಣಿ ಮಾಡದೆ ರೈತರು ಗೋವಿನಜೋಳವನ್ನು ಹೊಲದಲ್ಲಿಯೇ ಬಿಟ್ಟಿದ್ದರು. ಈಗ ವಾತಾವರಣ ಒಕ್ಕಣಿಗೆ ಅನುಕೂಲಕರವಾಗಿದೆ.

ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 1,800–2,000 ದರದಲ್ಲಿ ಗೋವಿನಜೋಳ ಮಾರಾಟ ಆಗುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 2,400 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರಿಗೆ ಅನುಕೂಲ ಆಗಬೇಕಾದರೆ ಕೂಡಲೇ ಖರೀದಿ ಕೇಂದ್ರ ತೆರೆಯಬೇಕಾದ ಅಗತ್ಯ ಇದೆ. ಖಾಸಗಿ ವ್ಯಾಪಾರಸ್ಥರು ಯಾವುದೇ ಪರವಾನಿಗೆ ಇಲ್ಲದೆ ನೇರವಾಗಿ ರೈತರ ಮನೆ ಮತ್ತು ಕಣಕ್ಕೆ ತೆರಳಿ ಗೋವಿನಜೋಳ ಖರೀದಿಸುತ್ತಿದ್ದಾರೆ. ಕೆಲ ಖರೀದಿದಾರರು ತಕ್ಷಣ ಹಣ ಕೊಟ್ಟರೆ, ಇನ್ನು ಕೆಲವರು ಅರ್ಧ ಹಣ ನೀಡಿ ಉಳಿದದ್ದನ್ನು ಒಂದು ವಾರ ಬಿಟ್ಟು ಕೊಡುತ್ತೇವೆ ಎಂದು ನಂಬಿಸಿ ಖರೀದಿ ಮಾಡುತ್ತಾರೆ.

ಆದರೆ ನಂತರ ಉಳಿದ ಹಣಕ್ಕಾಗಿ ರೈತರು ಸಂಪರ್ಕ ಮಾಡಿದಾಗ ಅವರು ಸಂಪರ್ಕಕ್ಕೆ ಸಿಗುವುದೇ ಇಲ್ಲ. ಹೀಗಾಗಿ ರೈತರು ಮೋಸ ಹೋಗುತ್ತಿದ್ದಾರೆ. ಅಲ್ಲದೆ ಖಾಸಗಿ ವ್ಯಾಪಾರಸ್ಥರು ತೂಕದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಕಷ್ಟಪಟ್ಟ ರೈತರಿಗೆ ಸರ್ಕಾರದಿಂದ ಅನುಕೂಲ ಆಗಬೇಕಾದರೆ ಜಿಲ್ಲಾಡಳಿತ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕಾಗಿದೆ.

ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಗೆ ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡಬೇಕು. ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಖರೀದಿ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಇಲ್ಲದಿದ್ದರೆ ಎಪಿಎಂಸಿಯಲ್ಲಿ ಇ-ಟೆಂಡರ್ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here