ಹೂವಿನಹಡಗಲಿ: ಹೂಳಲು ಗ್ರಾಮದ ವರ್ತಕ ಶೇಜವಾಡ್ಕರ್ ಕಿಡ್ನಾಪ್ ಮತ್ತು ಕೊಲೆ ಪ್ರಕರಣವನ್ನು ಕೇವಲ ಒಂದೇ ವಾರದಲ್ಲಿ ಭೇದಿಸಿ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೂಳಲು ಗ್ರಾಮದ ಮಲ್ಲಿಕಾರ್ಜುನ ಉಜ್ಜಮ್ಮನವರ (27) ಮತ್ತು ಯೋಗೀಶ್ ಅಂಗಡಿ (25) ಬಂಧಿತ ಆರೋಪಿಗಳಾಗಿದ್ದು,ಅಕ್ಟೋಬರ್ 10ರಂದು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಶೇಜವಾಡ್ಕರ್ ರನ್ನು ಅಪಹರಣ ಮಾಡಲಾಗಿತ್ತು.
ಆರೋಪಿಗಳು ಬಾಡಿಗೆ ಕಾರೊಂದನ್ನು ಪಡೆದು ವಾಯು ವಿಹಾರಕ್ಕೆ ಹೋಗಿದ್ದ ಶೇಜವಾಡ್ಕರ್ ರನ್ನು ಅಪಹರಣ ಮಾಡಿದ್ದರು. ನಂತರ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಅವರ ಅಕ್ಕ ಡಾ. ಮಂಜುಳಾ ಅವರಿಗೆ ಕರೆ ಮಾಡಿ, ಶೇಜವಾಡ್ಕರ್ ಬಿಡುಗಡೆಗಾಗಿ ₹5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಮಂಜುಳಾ ಅವರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ ಒಂದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು.
ಅಪಹರಣದ ಕುರಿತು ಹಿರೆ ಹಡಗಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸಂಪರ್ಕ ಕಡಿತಗೊಳಿಸಿ ಇಡೀ ಒಂದು ದಿನ ಅಪಹರಣ ಮಾಡಿಕೊಂಡು ಹೋಗಿದ್ದ ಶೇಜವಾಡ್ಕರ್ ಅವರನ್ನು ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿ ಕಾರಿನ ಡಿಕ್ಕಿ ಒಳಗೆ ಹಾಕಿ ಸುತ್ತಾಡಿದ್ದರು. ಈ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಂತರ ರಾತ್ರಿ ವೇಳೆ ಹರವಿ-ಬಸಾಪುರ ಸಮೀಪದ ತುಂಗಭದ್ರ ನದಿ ಸೇತುವೆಯಿಂದ ಶವವನ್ನು ನದಿಗೆ ಎಸೆದು, ಆರೋಪಿಗಳು ಶಿವಮೊಗ್ಗದ ಮೂಲಕ ಪುಣೆಗೆ ತೆರಳಿ ಅಲ್ಲಿ ಡಾಬಾದೊಂದರಲ್ಲಿ ಕೆಲಸಕ್ಕೆ ಸೇರಿದ್ದಾರೆ. ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಆರ್. ಭೂಸರೆಡ್ಡಿ, ಹಾಗೂ ಹಿರೇಹಡಗಲಿ ಠಾಣೆಯ ಪಿಎಸ್ಐ ಭರತ್ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದರು.
ಆರೋಪಿಗಳ ಲೊಕೇಶನ್ ಮತ್ತು ಚಲನವಲನಗಳನ್ನು ಆಧರಿಸಿ ಬಂಧಿಸಲಾಗಿದೆ. ಇನ್ನೂ ಆರೋಪಿಗಳ ಹೇಳಿಕೆ ಮಾಹಿತಿ ಆಧರಿಸಿ ಶವ ಎಸೆದಿದ್ದ ಸ್ಥಳಕ್ಕೆ ಧಾವಿಸಿ ಶವವನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದ ಹಿಂದೆ ಇನ್ನಾರಾದರೂ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಕೇವಲ ಒಂದೇ ವಾರದಲ್ಲಿ ಪ್ರಕರಣಭೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಆರ್ ಭೂಸರೆಡ್ಡಿ, ಹಿರೇಹಡಗಲಿಯ ಠಾಣೆಯ ಪಿಎಸ್ಐ ಭರತ್ ಪ್ರಕಾಶ್, ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.