ಪ್ರೀತಿಸಿ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದ ಮಾಜಿ ಪತ್ನಿಗೆ ಚಟ್ಟ ಕಟ್ಟಿದ ಪೊಲೀಸಪ್ಪ..!

0
Spread the love

ಬೆಳಗಾವಿ: ಪತಿಯೊಬ್ಬ ಪ್ರೀತಿಸಿ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದ ಮಾಜಿ ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಮನೆಗೆ ನುಗ್ಗಿ ಭೀಕರವಾಗಿ ಹತ್ಯೆಗೈದು ಬಳಿಕ ಡೋರ್ ಲಾಕ್ ಮಾಡಿಕೊಂಡು ಹಂತಕ ಪರಾರಿಯಾಗಿದ್ದಾನೆ.

Advertisement

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶಮ್ಮ‌ ನೆಲ್ಲಿಗಣಿ( 34) ಕೊಲೆಯಾದ ದುರ್ದೈವಿಯಾಗಿದ್ದು, ಕಾಗವಾಡ ತಾಲೂಕಿನ ಬನಜವಾಡ ಗ್ರಾಮ ಸಂತೋಷ ಕಾಂಬಳೆ ಕೊಲೆ ಆರೋಪಿ ಆಗಿದ್ದಾನೆ. ಸವದತ್ತಿ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ ಕಾಶಮ್ಮ ಪೊಲೀಸ್‌ ಇಲಾಖೆಯಲ್ಲಿ‌ ಕೆಲಸ ಮಾಡ್ತಿದ್ದ ಸಂತೋಷ ಪಾಟೀಲ್ ಇಬ್ಬರೂ ಸುಮಾರು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಮದುವೆಯಾದ ಬಳಿಕ ಸಂತೋಷ್ ಹೆಂಡತಿಯ ಮೇಲೆ ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಕಾಶಮ್ಮ ಗಂಡನಿಂದ ದೂರವಾಗಿದ್ದು, ತವರು ಮನೆ ಸೇರಿದ್ದರು. ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮದುವೆ ಜೀವನದಲ್ಲಿ ನಿರಂತರ ಕಲಹ ಮುಂದುವರಿದ ಹಿನ್ನೆಲೆಯಲ್ಲಿ ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 5, 2025 ರಂದು ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಸಂತೋಷ್ ಅವರು ಕಾಶಮ್ಮನನ್ನು ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಅಕ್ಟೋಬರ್ 13ರ ರಾತ್ರಿ 8 ಗಂಟೆಯ ವೇಳೆಗೆ ಸಂತೋಷ್ ಕಾಶಮ್ಮನ ಮನೆಗೆ ತೆರಳಿ ಗಲಾಟೆ ನಡೆಸಿದ್ದ. ಕೋಪದಿಂದ ಕತ್ತು ಕೊಯ್ದು , ಹೊಟ್ಟೆಗೆ ಮೂರು ಬಾರಿ ಇರಿದು ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮೂರು ದಿನಗಳ ಬಳಿಕ ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಸಂತೋಷ್ ಕಾಂಬಳೆಯ ಪತ್ತೆಗಾಗಿ ಪೊಲೀಸರಿಂದ  ಶೋಧ ಕಾರ್ಯ ನಡೆಯುತ್ತಿದೆ.


Spread the love

LEAVE A REPLY

Please enter your comment!
Please enter your name here