ಪ್ರಧಾ‌ನಿಯವರಿಗೆ ಸಲ್ಲಿಸಿದ ಅನುದಾನ ಮನವಿಗೆ ಇನ್ನೂ ಉತ್ತರ ಇಲ್ಲ: ಡಿ.ಕೆ. ಶಿವಕುಮಾರ್

0
Spread the love

ಬೆಂಗಳೂರು: 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ನಗರದಲ್ಲಿ 1650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

Advertisement

“ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ಹಣ ವ್ಯಯಿಸಲಾಗುತ್ತಿದೆ. 350 ಕಿಲೋ ಮೀಟರ್ ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1100 ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ” ಎಂದು ವಿವರಿಸಿದರು.

“ಕಳೆದ ಸಚಿವ ಸಂಪುಟ ಸಭೆಯಲ್ಲಿ 117 ಕಿಮೀ ಉದ್ದದ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಕಾಯ್ದೆ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಮ್ಮ ಸರ್ಕಾರ ರೈತರಿಗೆ ಬಂಪರ್ ಪರಿಹಾರ ನೀಡಲು ಮುಂದಾಗಿದೆ. ಮೂರು ಪಟ್ಟು ಪರಿಹಾರ, ಟಿಡಿಆರ್ ಅಥವಾ ಎಫ್ ಎಆರ್ ‌ನೀಡಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಯಾವ ಸರ್ಕಾರವೂ ಈ ವಿಚಾರದಲ್ಲಿ ಧೈರ್ಯ ತೋರಿಸಿರಲಿಲ್ಲ. 2007-08 ರಲ್ಲಿ ತೀರ್ಮಾನವಾಗಿದ್ದರೂ ಅನುಷ್ಠಾನ ಸಾಧ್ಯವಾಗಿರಲಿಲ್ಲ” ಎಂದು ತಿಳಿಸಿದರು.

ಪ್ರಧಾನಿಯವರಿಂದ ಇನ್ನೂ ಉತ್ತರ ಬಂದಿಲ್ಲ

“ಪ್ರಧಾ‌ನಿ ನರೇಂದ್ರ ಮೋದಿಯವರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ, ನಗರದ ಅಭಿವೃದ್ದಿಗೆ 1.5 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುದಾನ ನೀಡಬೇಕು, ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುತ್ತಿದೆ‌ ಎಂದು ಮನವಿ ಮಾಡಿದ್ದೆ. ಆದರೆ ಅವರಿಂದ ಇದುವರೆಗೂ ಉತ್ತರ ಬಂದಿಲ್ಲ”ಎಂದರು.

“ನಗರದಲ್ಲಿ 113 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಖಾಲಿಡಬ್ಬ ಸಂಸದನೊಬ್ಬ ಬರೀ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಿದ್ದಾನೆ” ಎಂದು ಕಿಡಿಕಾರಿದರು.

“ಐದು ಜನ ಸಂಸದರನ್ನು ಬೆಂಗಳೂರು ಜನತೆ ಗೆಲ್ಲಿಸಿದ್ದಾರೆ. ನಿರ್ಮಲ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ‌. ಒಬ್ಬನೇ ಒಬ್ಬ ಸಂಸದ ಹತ್ತು ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ತಂದಿದ್ದರೆ ಜನರು ನೀಡುವ ಶಿಕ್ಷೆಗೆ ನಾನು ತಲೆಬಾಗುತ್ತೇನೆ” ಎಂದು ಕಿಡಿಕಾರಿದರು.

 


Spread the love

LEAVE A REPLY

Please enter your comment!
Please enter your name here