ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲ್ಲೂಕಿನ ಕಣಿವೆ ಹಳ್ಳಿಯಲ್ಲಿ ರೈಲ್ವೇ ಹಳಿ ಲಯ ತಪ್ಪಿ, ಹಳಿಗೆ ಹಾಕಿದ್ದ ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು.
ಬುಧವಾರ ರಾತ್ರಿಯ ಮಳೆಯಿಂದ ಕಾಲುವೆಯ ನೀರು ಹರಿದ ಪರಿಣಾಮ ಈ ಹಳಿ ಹಾಳಾಗಿತ್ತು. ಇಂದು ಬೆಳಿಗ್ಗೆ ಚಿಕ್ಕಮಗಳೂರಿನಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಹಳ್ಳಿಗೆ ತಲುಪುತ್ತಿದ್ದಂತೆ, ರೈಲ್ವೇ ಸಿಬ್ಬಂದಿ ತಕ್ಷಣ ಲೋಕೋಪೈಲಟ್‌ಗೆ ತುರ್ತು ಮಾಹಿತಿ ನೀಡಿದ್ದಾರೆ. ಸಮಯಪ್ರಜ್ಞೆಯಿಂದ ರೈಲು ನಿಲ್ಲಿಸಿದ ಕಾರಣ, ಸಂಭವಿಸಬಹುದಿದ್ದ ದೊಡ್ಡ ಅಪಘಾತ ತಪ್ಪಿಸಿಕೊಳ್ಳಲಾಗಿದೆ.
ತುರ್ತು ದುರಸ್ತಿ ಕಾರ್ಯದ ಬಳಿಕ ರೈಲು ಶಿವಮೊಗ್ಗದತ್ತ ಪ್ರಯಾಣ ಮುಂದುವರಿಸಿದೆ. ಸ್ಥಳೀಯ ಹಳ್ಳಿಯ ಹಳಿಯ ಪಕ್ಕದಲ್ಲೇ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದ ಕಾರಣ, ರೈಲ್ವೇ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.