ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನ ತಲೆಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ಸುರೇಶ್ (49) ಗುಂಡು ಹಾರಿಸಿದ್ದು, ಮಗ ಹರೀಶ್ (28) ತಲೆಗೆ ಗಂಭೀರವಾಗಿ ಗಾಯವಾಗಿದೆ.
ತಂದೆ ಸುರೇಶ್ ಮತ್ತು ಹರೀಶ್ ಸಂಬಂಧ ಹಲವು ವರ್ಷಗಳಿಂದ ಹದಗೆಟ್ಟಿತ್ತು. ಸುರೇಶ್ ಕುಡಿತದ ಚಟಕ್ಕೆ ಬಿದ್ದು, ಮನೆಯಲ್ಲಿ ಸದಾ ಜಗಳ ಆಡುತ್ತಿದ್ದ. ಮಗ ಹರೀಶ್ ಕೂಡ ಇದರಿಂದ ಸಿಟ್ಟಿಗೆದ್ದು ತಂದೆಯ ಜೊತೆಗೆ ಆಗಾಗ ಗಲಾಟೆ ಮಾಡುತ್ತಿದ್ದ. ಆದರೆ ಇದೀಗ ಏಕಾಏಕಿ ಕುಡಿದು ಮನೆಗೆ ಬಂದ ಸುರೇಶ್ ಮತ್ತೆ ಜಗಳ ತೆಗೆದಿದ್ದು, ಕುಡಿದ ಮತ್ತಲ್ಲಿ ಮಗನ ಮೇಲೆ ಗುಂಡು ಹಾರಿಸಿದ್ದಾರೆ.
ಆ ಗುಂಡು ಹರೀಶ್ನ ತಲೆಯ ಬಲಭಾಗಕ್ಕೆ ತಗುಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಶಬ್ಧ ಕೇಳಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಹರೀಶ್ನ್ನು ತಕ್ಷಣ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಗಾಯದ ತೀವ್ರತೆಯನ್ನು ಗಮನಿಸಿ ಹರೀಶ್ನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



