ನವದೆಹಲಿ: ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಕ್ರಿಯೆ ಸಲ್ಲಿಸದ ರಾಜ್ಯಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಫಿಡವಿಟ್‌ಗಳನ್ನು ಸಲ್ಲಿಸಲು ವಿಫಲವಾದ ಕಾರಣ, ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ಹೊರತುಪಡಿಸಿ, ಕರ್ನಾಟಕ ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿಗಳು ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಇದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ಮುಂದಿನ ವಿಚಾರಣೆಯ ದಿನಾಂಕದಲ್ಲಿ ಅಧಿಕಾರಿಗಳು ಗೈರಾದರೆ ದಂಡ ವಿಧಿಸಲಾಗುವುದು ಅಥವಾ ಬಲವಂತದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ನವೆಂಬರ್ 3ರಂದು ಎಲ್ಲಾ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದಲ್ಲಿ ಹಾಜರಾಗಬೇಕಾಗಿದ್ದು, ಈ ಕುರಿತು ಕಠಿಣ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.
2023ರ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅನುಷ್ಠಾನದ ಕುರಿತು ಅಫಿಡವಿಟ್ ಸಲ್ಲಿಸದ ರಾಜ್ಯಗಳ ಬಗ್ಗೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಸಭಾಂಗಣದಲ್ಲಿ ಕಲಾಪ ನಡೆಸೋದಾಗಿಯೂ ಪೀಠ ತಿಳಿಸಿದೆ.
ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಬೀದಿ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಿರೋದನ್ನು ಮನಗಂಡ ಸುಪ್ರೀಂಕೋರ್ಟ್ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಲಾಗಿತ್ತು. ಆದರೆ ಮೂರು ರಾಜ್ಯಗಳನ್ನು ಹೊರತುಪಡಿಸಿ ಉಳಿದವರು ಈ ಬಗ್ಗೆ ಮಾಹಿತಿ ನೀಡದ ಕಾರಣ ಕೋರ್ಟ್ ಗರಂ ಆಗಿದ್ದು, ಈ ಬಗ್ಗೆ ಖಡಕ್ ಸೂಚನೆ ರವಾನಿಸಿದೆ.



