ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಬಣದ ಉಮಚಗಿ ಓಣಿಯಲ್ಲಿನ ಗೌರಿ ಗುಡಿಯ ಸುತ್ತಲಿನ ಸರ್ಕಾರದ ಜಾಗೆ, ರಸ್ತೆ ಒತ್ತುವರಿಯಾಗಿದ್ದು, ಪುರಸಭೆಯವರು ಒತ್ತುವರಿ ತೆರವುಗೊಳಿಸಿ ಈ ಭಾಗದ ಜನರಿಗೆ ಅನೂಕೂಲ ಕಲ್ಪಿಸಬೇಕು ಎಂದು ನಿವಾಸಿಗಳು ಸೋಮವಾರ ಪುರಸಭೆಗೆ ಮನವಿ ಸಲ್ಲಿಸಿದರು.
ಗೌರಿ ಗುಡಿಯ ಸುತ್ತಲಿನ ಸರ್ಕಾರಿ ಜಾಗೆ, ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಜನರ ಧಾರ್ಮಿಕ, ಸಾಮಾಜಿಕ ಮತ್ತು ಸಾಮೂಹಿಕ ಬಳಕೆಗೆ, ಸಂಚಾರಕ್ಕೆ ತೊಂದರೆಯಾಗಿದೆ. ಒತ್ತುವರಿ ತೆರವು ವಿಚಾರದಲ್ಲಿ ನೆರೆ-ಹೊರೆಯವರೊಂದಿಗೆ ನಿತ್ಯ ಮನಸ್ತಾಪ, ಕಿರಿಕಿರಿ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಕ್ಷಮ ಬಂದು ಪರಿಶೀಲಿಸಿ, ಒತ್ತುವರಿ ತೆರವು ಮಾಡಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಗಿರಿಜವ್ವ ಉಮಚಗಿ, ಸೋಮವ್ವ ಅಣ್ಣಿಗೇರಿ, ಅಕ್ಕಮ್ಮ ಶಿರೋಳ, ಸವಿತಾ ಇಟ್ಟಿಗೇರಿ, ಗಂಗಮ್ಮ ಬೊಮ್ಮನಹಳ್ಳಿ ಸೇರಿ ಓಣಿಯ ಮಹಿಳೆಯರು, ಮುಖಂಡರು ಇದ್ದರು. ಪುರಸಭೆ ಅಧಿಕಾರಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು.



