ಬೆಂಗಳೂರು: ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ವೊಂದರಲ್ಲಿ ಸರಕು ಸಾಗಿಸುವ ಲಿಫ್ಟ್ನ ಬಾಗಿಲಿನಲ್ಲಿ ತಲೆ ಸಿಲುಕಿ 22 ವರ್ಷದ ಯುವಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತನನ್ನು ಧಾರವಾಡ ಮೂಲದ ರಾಜೇಶ್ (22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ದಕ್ಷಿಣ ಉಪಹಾರ ಹೋಟೆಲ್ನಲ್ಲಿ ಈ ಅವಘಡ ಸಂಭವಿಸಿದೆ.
ರಾಜೇಶ್ ಹೋಟೆಲ್ ಮಾಲೀಕ ಅವಿನಾಶ್ ಅವರ ಸ್ನೇಹಿತನಾಗಿದ್ದು, ಸ್ವತಃ ಹೊಸ ಹೋಟೆಲ್ ಆರಂಭಿಸುವ ಉದ್ದೇಶದಿಂದ ಹೋಟೆಲ್ ನಿರ್ವಹಣೆ ಹಾಗೂ ಕೆಲಸದ ಅನುಭವ ಪಡೆಯಲು ಅಲ್ಲಿಗೆ ಬಂದಿದ್ದನು.
ಈ ವೇಳೆ ಸರಕು ಸಾಗಿಸುವ ಲಿಫ್ಟ್ ಬಳಸುತ್ತಿದ್ದಾಗ, ಲಿಫ್ಟ್ ಬಾಗಿಲಿನ ಹೊರಭಾಗಕ್ಕೆ ತಲೆ ಹಾಕಿದ್ದ ಸಂದರ್ಭದಲ್ಲಿ ಬಾಗಿಲಿನಲ್ಲಿ ತಲೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಯ ಬಳಿಕ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಮಾಹಿತಿ ತಿಳಿದು ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಿಫ್ಟ್ ಸುರಕ್ಷತಾ ಕ್ರಮಗಳು ಹಾಗೂ ಅವಘಡಕ್ಕೆ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



