ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಚ್‌ಎಎಲ್ ರಸ್ತೆ ಕೋಡಿಹಳ್ಳಿ ಬಳಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಮೃತ ಯುವತಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಜುಲೈ 13ರಂದು ಸಂಜೆ ಅಮೃತ ಮನೆ ಬಳಿ ಬಂದಿದ್ದ ಸೂರ್ಯ ಎಂಬಾತ ಆಕೆಯೊಂದಿಗೆ ಗಲಾಟೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ಅಮೃತಳ ಬೆನ್ನು ಮತ್ತು ಎದೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.
ಗಾಯಗೊಂಡಿದ್ದ ಅಮೃತಳನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಜುಲೈ 15ರಂದು ಸಂಜೆ ಮೃತಪಟ್ಟಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನಭೀಮಾನಗರ ಠಾಣೆ ಪೊಲೀಸರು ಸೂರ್ಯ ಹಾಗೂ ಆತನ ಸಹೋದರ ಧನುಷ್‌ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಅಮೃತ, ಧನುಷ್ ಹಾಗೂ ಸೂರ್ಯ ಒಂದೇ ಪ್ರದೇಶದವರಾಗಿದ್ದರು. ಪರಿಚಯದ ಬಳಿಕ ಧನುಷ್ ಮತ್ತು ಅಮೃತ ನಡುವೆ ಪ್ರೀತಿ ಬೆಳೆದಿತ್ತು. ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ಧನುಷ್‌ಗೆ ಈಗಾಗಲೇ ಮದುವೆಯಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದ ವಿಚಾರ ಅಮೃತಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ವಿಷಯ ತಿಳಿದ ನಂತರ ಅಮೃತ ಧನುಷ್‌ನಿಂದ ದೂರವಾಗಿದ್ದಳು.
ಇದರಿಂದ ಕೋಪಗೊಂಡ ಸೂರ್ಯ, ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಮೃತಳ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಅಮೃತ ಲಾ ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



