ಬೆಂಗಳೂರು: ನಟ ದರ್ಶನ್ಗೆ ಜೈಲಿನಲ್ಲಿ ಬೇಕಾದ ಕನಿಷ್ಠ ಸೌಲಭ್ಯ ನೀಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಳೆದ ಎರಡೂವರೆ ತಿಂಗಳಿಂದ ವಿಚಾರಣೆ ನಡೆದ ಬಳಿಕ, ಇಂದು ಕೋರ್ಟ್ ಮಹತ್ವದ ಆದೇಶ ನೀಡಿದೆ. ಜೈಲು ಮ್ಯಾನ್ಯುಯಲ್ ಪ್ರಕಾರ ಕನಿಷ್ಠ ಸೌಲಭ್ಯ ನೀಡಬೇಕು ಎಂದು ಕೋರ್ಟ್ ಸೂಚಿಸಿದ್ದು, ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಹೇಳಿದೆ. ಇದೇ 31ರಂದು ಚಾರ್ಜ್ಫ್ರೇಮ್ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ದರ್ಶನ್ ಪರ ವಕೀಲ ಸುನೀಲ್ ಮಾತನಾಡಿ, “ಇದು ಬರೀ ಹಾಸಿಗೆ ಅಥವಾ ತಲೆಯ ದಿಂಬಿನ ವಿಚಾರ ಅಲ್ಲ. ಕೋರ್ಟ್ ನೀಡಿದ ಆದೇಶವನ್ನು ಜೈಲು ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಆದ್ದರಿಂದ ಕೋರ್ಟ್ ಇಂದು ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದೆ,” ಎಂದರು.
“ಜೈಲು ಮ್ಯಾನ್ಯುಯಲ್ ಪ್ರಕಾರ ಕನಿಷ್ಠ ಸೌಲಭ್ಯ ನೀಡಿ, ತಿಂಗಳಿಗೆ ಒಮ್ಮೆ ಚಾದರ್ ಬದಲಾಯಿಸಬೇಕು ಎಂದು ಕೋರ್ಟ್ ಸ್ಪಷ್ಟ ಆದೇಶ ನೀಡಿದೆ,” ಎಂದರು. ಇದಕ್ಕೆ ಪ್ರತಿಯಾಗಿ ಸರ್ಕಾರಿ ಪರ ವಕೀಲರು, “ದರ್ಶನ್ ಪರದಿಂದ ಟ್ರಯಲ್ ತಡ ಮಾಡಲಾಗುತ್ತಿದೆ” ಎಂದು ಆರೋಪಿಸಿದರೂ, ಪ್ರತಿಯಾಗಿ ವಕೀಲ ಸುನೀಲ್ “ಸುಪ್ರೀಂ ಕೋರ್ಟ್ ತ್ವರಿತ ಟ್ರಯಲ್ ಸೂಚಿಸಿದೆ ಅಷ್ಟೇ ಹೊರತು ತಕ್ಷಣ ಟ್ರಯಲ್ ಪೂರ್ಣಗೊಳಿಸಬೇಕು ಎಂದು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.


