ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸವೇಶ್ವರ ನಗರದಲ್ಲಿನ ನಿವಾಸಿಗಳು ಗುರುವಾರ ಪುರಸಭೆಗೆ ದೌಡಾಯಿಸಿ ಬಸವೇಶ್ವರ ನಗರಕ್ಕೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಅರ್ಪಿಸಿದರು.
ಈ ವೇಳೆ ನಿವೃತ್ತ ಎಎಸ್‌ಐ ಎಸ್.ಆರ್. ಈಳಗೇರ ಮತ್ತು ನಿವೃತ್ತ ಸೈನಿಕ ಸಿ.ಎ. ಹುಡೇದ ಮಾತನಾಡಿ, ಕಳೆದ 33 ವರ್ಷಗಳ ಹಿಂದೆ ಪಟ್ಟಣದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಸವೇಶ್ವರ ಲೇಔಟ್ ನಿರ್ಮಾಣವಾಗಿದೆ. ಆದರೆ ಇಲ್ಲಿ ಒಂದು ಕಡೆಯಲ್ಲಿಯೂ ಸರಿಯಾದ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಬಸವೇಶ್ವರ ನಗರಕ್ಕೆ ಕಳೆದ 1 ತಿಂಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನೀರಿಗಾಗಿ ಪುರಸಭೆಗೆ ಹಿಡಿಶಾಪ ಹಾಕುವಂತಾಗಿದೆ.
ಪುರಸಭೆಗೆ ಅತಿ ಹೆಚ್ಚು ತೆರಿಗೆ ಕಟ್ಟುವ ಬಸವೇಶ್ವರ ನಗರದ ನಿವಾಸಿಗಳು ಯಾವ ತಪ್ಪು ಮಾಡಿದ್ದಾರೆ? ಚರಂಡಿಗಳು ಗಲೀಜಿನಿಂದ ತುಂಬಿ ತುಳುಕುತ್ತಿದ್ದರೂ ಕಸ ತೆಗೆದುಕೊಂಡು ಹೋಗುವ ವಾಹನಗಳು ಬರುತ್ತಿಲ್ಲ. ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಯವರು ತ್ಯಾಜ್ಯಗಳನ್ನು ಬಸವೇಶ್ವರ ನಗರಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕದಲ್ಲಿ ತಂದು ಹಾಕುತ್ತಾರೆ. ಇದರಿಂದ ಬಸವೇಶ್ವರ ನಗರಕ್ಕೆ ಹೋಗುವ ಮತ್ತು ಬರುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕುಡಿಯುವ ನೀರು ಇಲ್ಲದೆ ಜೀವನ ಸಾಗಿಸುವುದು ಅಸಾಧ್ಯ. ಬಸವೇಶ್ವರ ನಗರದಲ್ಲಿ ಹೆಚ್ಚಾಗಿ ನೌಕರಿ ಮಾಡುವವರು ಹಾಗೂ ನಿವೃತ್ತ ನೌಕರರು ವಾಸ ಮಾಡುತ್ತಿದ್ದಾರೆ. ಪದೇ ಪದೇ ಪುರಸಭೆಗೆ ಬಂದು ಮನವಿ ಸಲ್ಲಿಸಿದರೂ ಯಾವುದೇ ರೀತಿ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಬಿ.ಎಫ್. ಉಪ್ಪಾರ, ಎಸ್.ಎಸ್. ಪ್ರಸಾದ, ರಿಯಾಜ್ ಲಕ್ಷ್ಮೇಶ್ವರ, ಎಂ.ಎ. ಬಳ್ಳಾರಿ, ಗುರುನಾಥ ಗಜೇಂದ್ರಗಡ, ಸಿದ್ದಣ್ಣ ಬಣಕಾರ, ಕಲಾವತಿ ಮುದಗಲ್ಲ, ಗೀತಾ ಹೆರೂರ, ತನುಜಾ ಪ್ರಸಾದ ಮುಂತಾದವರು ಇದ್ದರು.



