ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದಲ್ಲಿರುವ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯದೈವಗಳಾದ ಶ್ರೀ ವೀರಭದ್ರೇಶ್ವರ, ಶ್ರೀ ಗಡ್ಡಿಬಸವೇಶ್ವರ ಹಾಗೂ ಶಂಕರಲಿಂಗ ದೇವಸ್ಥಾನಗಳು ಕಳ್ಳರ ಕಾಟದಿಂದ ತತ್ತರಿಸಿವೆ.

ಒಂದೇ ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ಕಳ್ಳತನ ನಡೆದಿರುವುದು ಭಕ್ತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದ ಕಾಣಿಕೆ ಹುಂಡಿ ಹಾಗೂ ಇನ್ನಿತರೆ ವಸ್ತುಗಳನ್ನು ಗುರಿಯಾಗಿಸಿಕೊಂಡಿರುವ ಖದೀಮರು, ರಾತ್ರಿ ವೇಳೆ ದೇವಸ್ಥಾನ ಪ್ರವೇಶಿಸಿ ಕಳ್ಳತನ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಸರಣಿ ಕಳ್ಳತನಗಳಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಕಾಣಿಕೆ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.
ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಿತ್ತು. ಆದರೆ ಕ್ಯಾಮರಾಗಳಿದ್ದರೂ ಖದೀಮರು ಹಿಂದೆ ಸರಿಯದೆ, ಕಳ್ಳತನಕ್ಕೂ ಮುನ್ನ ಸಿಸಿ ಕ್ಯಾಮರಾಗಳನ್ನೇ ಧ್ವಂಸಗೊಳಿಸಿ ತಮ್ಮ ಕೃತ್ಯ ಎಸಗಿದ್ದಾರೆ.
ಆದರೆ ಕಳ್ಳರ ಈ ಕರಾಮತ್ತು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಿಲ್ಲ. ದೇವಸ್ಥಾನದ ಸಮೀಪದ ಗಿಡದಲ್ಲಿ ಅಳವಡಿಸಲಾಗಿದ್ದ ಮತ್ತೊಂದು ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿದ್ದು, ಪ್ರಕರಣಕ್ಕೆ ಮಹತ್ವದ ಸುಳಿವು ದೊರೆತಿದೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತರು ಕಳ್ಳರ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಶಿರಹಟ್ಟಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ನಾಲ್ಕು ಬಾರಿ ಕಳ್ಳತನ ನಡೆದಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕಳ್ಳತನಗಳ ಸರಣಿ ಘಟನೆಗಳಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, “ಆರಾಧ್ಯದೈವದ ದೇವಸ್ಥಾನಗಳೇ ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



