ಬೆಂಗಳೂರು: ‘ಜೋಡಿ ನಂ.1’ ರಿಯಾಲಿಟಿ ಶೋನಲ್ಲಿ ದಾಂಪತ್ಯ ಜೀವನದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ಟೀಕೆಗಳಿಗೆ ನಟಿ ಗೀತಾ ಭಾರತಿ ಭಟ್ ಹಾಗೂ ಅವರ ಪತಿ ರಾಜಾರಾಮ್ ಭಟ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಸಂದೇಶದಲ್ಲಿ ದಂಪತಿ, ತಮ್ಮ ಹೇಳಿಕೆಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
‘ನಾವು ಹೇಳಿದ ಸಂಪೂರ್ಣ ಮಾತುಗಳನ್ನು ಕೇಳದೇ, ಅದರಲ್ಲಿನ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಜಗಳ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ವಾಸ್ತವದಲ್ಲಿ ಅದು ಗಂಡ-ಹೆಂಡತಿ ನಡುವಿನ ಮುಕ್ತ ಸಂಭಾಷಣೆ. ಜೀವನದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ್ದೇವೆ ಅಷ್ಟೇ’ ಎಂದು ಗೀತಾ ಸ್ಪಷ್ಟಪಡಿಸಿದ್ದಾರೆ.
ಟಿಆರ್‌ಪಿ ಮತ್ತು ಪ್ರಚಾರಕ್ಕಾಗಿ ಕಾರ್ಯಕ್ರಮದಲ್ಲಿ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ‘ಎಲ್ಲರ ಮನೆಗಳಲ್ಲಿ ನಡೆಯುವ ಸಾಮಾನ್ಯ ಸಂಗತಿಗಳನ್ನೇ ಚರ್ಚೆ ಮಾಡಿದ್ದೇವೆ. ಅದನ್ನು ವಿವಾದ ಎಂದು ಬಿಂಬಿಸುವುದು ತಪ್ಪು’ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಬಳಿಕ ತಮ್ಮ ಅನುಭವಗಳಿಗೆ ಸಂಬಂಧಿಸಿ ಅನೇಕ ಕುಟುಂಬಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗೀತಾ ಹೇಳಿದ್ದಾರೆ. ‘ನಿಮ್ಮ ಮಾತು ಕೇಳಿದ ಬಳಿಕ ನಮ್ಮ ಕುಟುಂಬದಲ್ಲೂ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದೇವೆ’ ಎಂಬ ಪ್ರತಿಕ್ರಿಯೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣದ ಕೆಲವು ಇನ್ಫ್ಲುಯೆನ್ಸರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗೀತಾ, ‘ವೈರಲ್ ಆಗಿರುವ ವಿಡಿಯೋಗಳನ್ನು ಮರುಬಳಕೆ ಮಾಡಿಕೊಂಡು ನೆಗೆಟಿವ್ ಅಭಿಪ್ರಾಯಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದು ಸಮಾಜಕ್ಕೆ ಯಾವುದೇ ರೀತಿಯ ಸಕಾರಾತ್ಮಕ ಕೊಡುಗೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ರಾಜಾರಾಮ್ ಭಟ್ ಮಾತನಾಡಿ, ‘ಬೇರೆಯವರ ಕಷ್ಟವನ್ನು ಮನರಂಜನೆ ಅಥವಾ ಜನಪ್ರಿಯತೆಗಾಗಿ ಬಳಸಿಕೊಳ್ಳುವ ಸಂಸ್ಕೃತಿ ಹೆಚ್ಚುತ್ತಿದೆ. ಸಮಾಜಕ್ಕೆ ಉಪಯುಕ್ತವಾಗುವ ವಿಚಾರಗಳ ಬಗ್ಗೆ ಮಾತನಾಡುವುದು ಮುಖ್ಯ’ ಎಂದು ಹೇಳಿದರು.
ಕೊನೆಯಲ್ಲಿ ದಂಪತಿ, ‘ನೆಗೆಟಿವಿಟಿಯನ್ನು ಹುಡುಕುವ ಬದಲು ವಿಷಯದ ಸಂಪೂರ್ಣ ಅರ್ಥವನ್ನು ತಿಳಿದು ಪ್ರತಿಕ್ರಿಯಿಸಿ. ಸಾಮಾಜಿಕ ಜಾಲತಾಣಗಳು ಜವಾಬ್ದಾರಿಯುತ ಸಂವಾದದ ವೇದಿಕೆಯಾಗಬೇಕು’ ಎಂದು ಮನವಿ ಮಾಡಿದ್ದಾರೆ.



