ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಭಿತ್ತಿಚಿತ್ರ ಸಿನಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಚಿತ್ರದಲ್ಲಿ ‘ನಾಡಿಯಾ’ ಪಾತ್ರ ನಿರ್ವಹಿಸುತ್ತಿರುವ ಕಿಯಾರಾ ಅಡ್ವಾಣಿ ಅವರ ಹೊಸ ರೂಪ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಕೆಂಪು ಬಣ್ಣದ ವೇಷಭೂಷಣ, ಆಕರ್ಷಕ ಮೇಕಪ್ ಹಾಗೂ ಗಂಭೀರ ಭಾವಭಂಗಿಯೊಂದಿಗೆ ಕಾಣಿಸಿಕೊಂಡಿರುವ ಕಿಯಾರಾ ಅವರ ಈ ಲುಕ್ ಚಿತ್ರದ ಪಾತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಹಿಂದೆ ಬಿಡುಗಡೆಯಾದ ‘ತಬಾಹಿ’ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದವು. ಚಿತ್ರದಲ್ಲಿ ಕಿಯಾರಾ ಸರ್ಕಸ್‌ನ ಪ್ರಮುಖ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದು, ಕಥೆಯ ಕೇಂದ್ರಬಿಂದುವಾಗಿರುವ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.
ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಕಿಯಾರಾ, ‘ಟಾಕ್ಸಿಕ್’ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವಿಶಿಷ್ಟ ಸಿನಿಮಾ ಎಂದು ಹೇಳಿದ್ದರು. ಯಶ್ ಅಭಿನಯದ ಮಾಸ್ ಸಿನಿಮಾವನ್ನು ಮಹಿಳಾ ಪ್ರಧಾನ ಕಥೆಯೆಂದು ಅವರು ವಿವರಿಸಿದ್ದರಿಂದ ಚಿತ್ರದ ಕಥಾಹಂದರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ. ಯಶ್ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣದಿಂದಲೇ ‘ಟಾಕ್ಸಿಕ್’ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

