ಬೆಂಗಳೂರು: ‘ರಾಮಾಯಣ’ ಟ್ರೇಲರ್ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ನಟಿ ರಾಧಿಕಾ ಪಂಡಿತ್ ಅವರ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸುತ್ತಿರುವ ಸಮಯದಲ್ಲೇ ರಾವಣನ ಬೃಹತ್ ಪ್ರತಿಮೆಯ ಮುಂದೆ ತೆಗೆಸಿಕೊಂಡ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ಸಮುದ್ರ ತೀರದಲ್ಲಿರುವ ದಶಮುಖ ರಾವಣನ ಪ್ರತಿಮೆಯ ಎದುರು ಸ್ಟೈಲಿಷ್ ಆಗಿ ನಿಂತಿರುವ ಫೋಟೋಗೆ “ಗೊತ್ತಿರೋರಿಗೆ ಮಾತ್ರ ಗೊತ್ತು” ಎಂದು ಕ್ಯಾಪ್ಶನ್ ನೀಡಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
‘ರಾಮಾಯಣ’ ಟ್ರೇಲರ್ನಲ್ಲಿ ಯಶ್ ಅವರ ರಾವಣನ ಲುಕ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಪೋಸ್ಟ್ನ್ನು ಅಭಿಮಾನಿಗಳು ಚಿತ್ರದ ಜೊತೆ ಸಂಪರ್ಕಿಸಿ ವ್ಯಾಖ್ಯಾನಿಸುತ್ತಿದ್ದಾರೆ. “ಇವರೇ ನಮ್ಮ ರಾವಣನ ಮಂಡೋದರಿ”, “ರಾವಣನಿಗೆ ಪರ್ಫೆಕ್ಟ್ ಸಪೋರ್ಟ್” ಎಂಬ ಕಾಮೆಂಟ್ಗಳು ವೈರಲ್ ಆಗಿವೆ.
ಬಿಳಿ ಬಣ್ಣದ ಲಾಂಗ್ ಫ್ರಾಕ್ ಹಾಗೂ ಕಪ್ಪು ಕನ್ನಡಕದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದು, ಅವರ ಸ್ಟೈಲ್ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಟ್ರೇಲರ್ನಿಂದ ಈಗಾಗಲೇ ಭಾರೀ ಹೈಪ್ ಸೃಷ್ಟಿಸಿರುವ ‘ರಾಮಾಯಣ’ ಚಿತ್ರದ ಚರ್ಚೆಯನ್ನು ರಾಧಿಕಾ ಅವರ ಈ ಪೋಸ್ಟ್ ಮತ್ತಷ್ಟು ಉತ್ತುಂಗಕ್ಕೇರಿಸಿದೆ.



