ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಗ್ಬಾಸ್ ಮನೆಯ ಸಿಬ್ಬಂದಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಓಂ ಪ್ರಕಾಶ್ ರಾವ್ ಅವರಿಗೆ ಅಪಘಾತವಾಗಿದ್ದು, ಈ ವೇಳೆ ಅವರ ಕಾಲಿಗೆ ಬಲವಾದ ಪೆಟ್ಟಾಗಿತ್ತು ಎನ್ನಲಾಗಿದೆ. ಇದೀಗ ಅದೇ ಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಗ್ಬಾಸ್ ತಂಡದ ಮೂಲಗಳು ತಿಳಿಸಿವೆ.
ಬಿಗ್ಬಾಸ್ ಮನೆಯಲ್ಲಿ ನಿರಂತರವಾಗಿ ಟಾಸ್ಕ್ಗಳಲ್ಲಿ ಭಾಗವಹಿಸಿದ್ದರಿಂದ ಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಹಾಗೂ ವೈದ್ಯಕೀಯ ತಪಾಸಣೆಗಾಗಿ ಸಿಬ್ಬಂದಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸದ್ಯ ಓಂ ಪ್ರಕಾಶ್ ರಾವ್ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಚಿಕಿತ್ಸೆ ಪಡೆದು ಮತ್ತೆ ಬಿಗ್ಬಾಸ್ ಮನೆಗೆ ಮರಳಲು ಅವರು ಸಿದ್ಧರಾಗಿದ್ದಾರೆ ಎಂದು ಬಿಗ್ಬಾಸ್ ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಆದರೆ, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.



