ಬೆಂಗಳೂರು: ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.
ಈ ಬಾರಿ ಬೆಂಗಳೂರಿನಲ್ಲಿ ದುಬಾರಿ ಗಣೇಶ ಮೂರ್ತಿಯೊಂದು ಗಮನ ಸೆಳೆಯುತ್ತಿದ್ದು, ಮಿಲ್ಕ್ ಕಾಲೋನಿಯಲ್ಲಿ ಬರೋಬ್ಬರಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಅಮೆರಿಕನ್ ಡೈಮಂಡ್, ಮುತ್ತು, ರತ್ನ ಹಾಗೂ ಹವಳಗಳಿಂದ ಅಲಂಕರಿಸಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಬೆಂಗಳೂರಿನ ಮಿಲ್ಕ್ ಕಾಲೋನಿಯ ಸ್ವಸ್ತಿಕ ಯುವಕರ ಸಂಘ ಕಳೆದ 41 ವರ್ಷಗಳಿಂದ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ವಿಶೇಷವಾಗಿ ವಿನ್ಯಾಸಗೊಳಿಸಿರುವ ಗಣೇಶ ಮೂರ್ತಿ ಸುಮಾರು 5 ಅಡಿ ಎತ್ತರವಿದ್ದು, ಬರೋಬ್ಬರಿ 700 ಕೆಜಿ ತೂಕ ಹೊಂದಿದೆ.
ಸೊಲ್ಲಾಪುರದ ಕುಶಲಕರ್ಮಿಗಳು ಸುಮಾರು ಮೂರು ತಿಂಗಳ ಕಾಲ ಶ್ರಮಿಸಿ ಈ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಅಮೆರಿಕನ್ ಡೈಮಂಡ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಬಳಸಿ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ.
ಇನ್ನು ಗಣೇಶ ಮೂರ್ತಿಯಷ್ಟೇ ಮಂಟಪವೂ ವಿಶೇಷವಾಗಿದ್ದು, ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ಆಂಧ್ರಪ್ರದೇಶದ ಲೇಪಾಕ್ಷಿ ಶೈಲಿಯಲ್ಲಿ ಭವ್ಯ ಮಂಟಪ ನಿರ್ಮಿಸಲಾಗುತ್ತಿದೆ. ವಿಶೇಷ ಗಣೇಶ ಮೂರ್ತಿ ಹಾಗೂ ಮಂಟಪವನ್ನು ನೋಡಲು ಸಾರ್ವಜನಿಕರು ಕಾತರರಾಗಿದ್ದಾರೆ.
ಪ್ರತಿ ವರ್ಷ ಗಣೇಶೋತ್ಸವದ ಮೂಲಕ ಭಕ್ತಿ, ಸಂಭ್ರಮ ಹಾಗೂ ಒಗ್ಗಟ್ಟಿನ ಸಂದೇಶ ಸಾರುತ್ತಿರುವ ಸ್ವಸ್ತಿಕ ಯುವಕರ ಸಂಘ, ಈ ಬಾರಿ ವಿಭಿನ್ನ ಗಣೇಶ ಮೂರ್ತಿಯ ಮೂಲಕ ಗಮನ ಸೆಳೆಯುತ್ತಿದೆ.



