ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ನಾಡು, ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದ್ದು, ಕನ್ನಡ ನಾಡು-ನುಡಿ ನಮ್ಮ ಅಸ್ಮಿತೆಯಾಗಿದೆ ಎಂದು ತಾ.ಪಂ ಇಒ ಕೃಷ್ಣಪ್ಪ ಧರ್ಮರ ಅಭಿಪ್ರಾಯಪಟ್ಟರು.
ಅವರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಹಾಗೂ ರಾಷ್ಟ್ರೀಯ ಕವಿ ಕುವೆಂಪು ವಿರಚಿತ `ಜೈ ಭಾರತ ಜನನಿಯ ತನುಜಾತೆ’ ಕನ್ನಡ ನಾಡಗೀತೆಗೆ ನೂರು ವರ್ಷಗಳು ಸಂದ ಸಂಭ್ರಮದ ಪ್ರಯುಕ್ತ ಗುರುವಾರ ಪಟ್ಟಣದ ಸೆವೆಂತ್ ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ನಾಡಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಮಾತನಾಡಿ, ಕನ್ನಡದ ಅಭಿವೃದ್ಧಿ ಕೇವಲ ಮಾತುಗಳಿಂದ ಮಾತ್ರ ಸಾಧ್ಯವಿಲ್ಲ. ಕಿಂಚಿತ್ತಾದರೂ ಕೃತಿಯ ಮೂಲಕ ಸಾಧಿಸಬೇಕಿದೆ. ನಾವು ಕನ್ನಡವನ್ನು ಉಳಿಸಬೇಕಾದರೆ ಕನ್ನಡವನ್ನು ಬಳಸಬೇಕು. ಕುವೆಂಪು ವಿರಚಿತ ನಾಡಗೀತೆ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಹೇಳಿದರು.
ಲಕ್ಷ್ಮೇಶ್ವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ ಮಾತನಾಡಿ, ನಿಗದಿಪಡಿಸಿದ ಧಾಟಿಯಲ್ಲಿ, ಅವಧಿಯಲ್ಲಿ ಹಾಡುವ ಮೂಲಕ ನಾಡಗೀತೆಯ ಶ್ರೇಷ್ಠತೆ, ವಿಶೇಷತೆಯನ್ನು ನಾವೆಲ್ಲ ಎತ್ತಿಹಿಡಿಯಬೇಕಾಗಿದೆ ಎಂದರು.
ಗ್ರೇಡ್ 2 ವಿಶೇಷ ತಹಸೀಲ್ದಾರ್ ಮಂಜುನಾಥ ಅಮಾಸಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ, ಸೆವೆಂತ್ ಡೇ ಶಾಲೆಯ ವೈಜನಾಥ ಮಾತನಾಡಿದರು. ಪ್ರಾಚಾರ್ಯ ಅಶೋಕ ಪೀಟರ್, ಬಿ.ಸಿ. ಪಟ್ಟೇದ, ಡಾ. ಅರ್ಜುನ ವಠಾರದ, ಎಚ್.ಎಂ. ಗುತ್ತಲ ಪಾಲ್ಗೊಂಡಿದ್ದರು.
ಸೆವೆಂತ್ ಡೇ ಶಾಲೆಯ ಶಿಕ್ಷಕಿಯರು ಪ್ರಾರ್ಥಿಸಿದರು. ಸಿ.ಆರ್.ಪಿ. ಸತೀಶ ಬೋಮಲೆ ಸ್ವಾಗತಿಸಿದರು. ಉಮೇಶ ನೇಕಾರ ನಿರೂಪಿಸಿದರು. ಎನ್.ಎ. ಮುಲ್ಲಾ ವಂದಿಸಿದರು. ಕಸಾಪದ ನಾಗರಾಜ್ ಮಜ್ಜಿಗುಡ್ಡ, ಈರಣ್ಣ ಗಾಣಿಗೇರ ನಾಡಗೀತೆ ಗಾಯನ ಸ್ಪರ್ಧೆ ನಡೆಸಿಕೊಟ್ಟರು. ಲಕ್ಷ್ಮೇಶ್ವರ ಪಟ್ಟಣ ವ್ಯಾಪ್ತಿಯ 13 ಪ್ರೌಢಶಾಲೆಗಳಿಂದ 52ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಪ್ರಭುಗೌಡ ಯಕ್ಕಿಕೊಪ್ಪ, ಎಚ್.ಎಂ. ಸಪ್ಪಿನ, ಪಿ.ಎಲ್. ಪಾಟೀಲ, ವೀರಣ್ಣ ಕಮ್ಮಾರ, ಸುವರ್ಣ ಹಡಗಲಿ, ಕೆಂಚಕ್ಕನವರ, ಬಸಿರ್ ಅಹಮದ್ ಚೌರಿ ಹಾಜರಿದ್ದರು. ಮಲ್ಲಿಕಾರ್ಜುನ ಕಳಸಾಪೂರ ಮತ್ತು ಡಾ. ಅರ್ಜುನ ವಠಾರದ ನಿರ್ಣಾಯಕರಾಗಿದ್ದರು.
ಸ್ಪರ್ಧೆಯ ಫಲಿತಾಂಶ:
ಬಿ.ಸಿ.ಎನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ (ಪ್ರಥಮ), ಲಿಟಲ್ ಹಾರ್ಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ (ದ್ವಿತೀಯ), ಯೂನಿಕ್ ಆಂಗ್ಲ ಮಾಧ್ಯಮ ಶಾಲೆ (ತೃತೀಯ) ಬಹುಮಾನ ಪಡೆದುಕೊಂಡಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ 1924-25ರ ಸಂದರ್ಭದಲ್ಲಿ ರಾಷ್ಟ್ರೀಯ ಕವಿ ಕುವೆಂಪು ಅವರಿಂದ `ಜೈ ಭಾರತ ಜನನಿಯ ತನುಜಾತೆ’ ಗೀತೆ ರಚನೆಯಾಯಿತು. ಅದಕ್ಕೆ ಈಗ ನೂರರ ಸಂಭ್ರಮ. ಕರ್ನಾಟಕದ ಶ್ರೇಷ್ಠತೆ, ಏಕತೆಯನ್ನು ಸಾರುವ ನಮ್ಮ ನಾಡಗೀತೆಯನ್ನು ಯಾವುದೇ ಅಭಾಸಗಳಿಲ್ಲದೆ ಹಾಡುವಂತಾಗಬೇಕು ಎಂಬ ಕಾರಣದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.



