ಬಂಟ್ವಾಲ: ಬಿಸಿಲೆ ಘಾಟ್ ಬಳಿ ಅಪಘಾತದ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ ತೋರಿದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ ಕೊಟ್ಟಿದೆ.
ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಮದುವೆ ದಿಬ್ಬಣದ ಮ್ಯಾಕ್ಸಿಕ್ಯಾಬ್ ಬಿಸ್ಲೆ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಎತ್ತರದಿಂದ ಪಲ್ಟಿಯಾದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಅವರನ್ನು ತುರ್ತುವಾಗಿ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ತೆರಳುತ್ತಿದ್ದಾಗ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ಎಂಬ ಬೈಕ್ ಸವಾರ ದಾರಿ ಬಿಡದೇ ಹಠದಿಂದ ಹಿಂಬಾಲಿಸಿದ್ದಾನೆ.
ಸುಮಾರು 3 ರಿಂದ 4 ಕಿಲೋಮೀಟರ್‌ಗಳವರೆಗೆ ಆಂಬುಲೆನ್ಸ್‌ಗೆ ಅಡ್ಡಗಟ್ಟಿದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಯಿತು. ನಂತರ ಬಂಟ್ವಾಳ ಪೊಲೀಸರು ವೀಡಿಯೊ ಆಧರಿಸಿ ಮನ್ಸೂರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ತುರ್ತು ಸೇವೆಗೆ ಅಡ್ಡಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ JMFC ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಘಟನೆ ತುರ್ತು ಸೇವೆಗಳಿಗೆ ಅಡ್ಡಿ ಮಾಡಿದರೆ ಕಾನೂನು ಹೇಗೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಸಾರ್ವಜನಿಕರು ಮಾನವೀಯತೆ ಕಾಪಾಡಿ ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


