ಮಂಡ್ಯ: ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಎಂಇಎಸ್ ಪುಂಡಾಟಿಕೆ ನಡೆದಿರುವ ವಿಚಾರವಾಗಿ ಮಾತನಾಡಿದ ಅವರು,
ಭಾಷೆ, ನೆಲ, ಜಲದ ವಿಚಾರದಲ್ಲಿ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ ಖಂಡನೀಯ ಎಂದು ಹೇಳಿದರು. “ಈ ರೀತಿಯ ಆಕ್ರಮಣವನ್ನು ತಡೆಯಲು ನಮ್ಮ ಸರ್ಕಾರ ಅಗತ್ಯವಿದ್ದರೆ ಕಠಿಣ ಕ್ರಮಕ್ಕೂ ಹಿಂಜರಿಯುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.
“ಭಾಷೆ, ನೆಲ, ಜಲದ ಸಮಸ್ಯೆ ಬಗೆಹರಿಸಲು ತಿಲಾಂಜಲಿ ಹೇಳುವ ಅಧಿಕಾರ ಕೇಂದ್ರ ಸರ್ಕಾರಕ್ಕಷ್ಟೆ ಇದೆ. ಕೇಂದ್ರ ಸರ್ಕಾರವೇ ಸಂಬಂಧಿತ ರಾಜ್ಯಗಳನ್ನು ಕರೆದು ಮಾತನಾಡಬೇಕು. ಪರಿಸ್ಥಿತಿ ವಿಶ್ಲೇಷಿಸಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ,” ಎಂದರು.
ತಮಿಳುನಾಡು–ಕರ್ನಾಟಕ ನೀರು ವಿವಾದದ ಕುರಿತು ಮಾತನಾಡಿದ ಸಚಿವರು, “ತಮಿಳುನಾಡು ಸಮಸ್ಯೆ ಎಂದೇನಿಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಪೀಲ್ ಸಲ್ಲಿಸಿದರೆ ಒಂದು ದಿನದಲ್ಲೇ ವಿಷಯ ಬಗೆಹರಿಯುತ್ತದೆ. ನೀರು ಇದ್ದಾಗ ಬಿಡುತ್ತೇವೆ, ಇಲ್ಲದಾಗ ಮಾತ್ರ ಸಮಸ್ಯೆ ಬರುವುದು. ಇದು ರಾಜಕೀಯ ಹಿತಾಸಕ್ತಿಯಿಂದ ನಡೆಯುತ್ತಿದೆ,” ಎಂದು ಹೇಳಿದರು.
“ಮಹಾರಾಷ್ಟ್ರದಲ್ಲಿಯೂ ಕನ್ನಡಿಗರಿದ್ದಾರೆ. ಅವರಿಗೂ ನಮ್ಮ ಸಹಕಾರ ಬೇಕು, ನಮಗೂ ಅವರ ಸಹಕಾರ ಅಗತ್ಯ. ಎಲ್ಲ ಅಂಶಗಳನ್ನು ಅವಲೋಕಿಸಿ ನಮ್ಮ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಯೇ ನಮ್ಮ ಸರ್ಕಾರದ ಆದ್ಯತೆ,” ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.


