ನವದೆಹಲಿ: ಭಾರತದ ರಾಜಧಾನಿ ದೆಹಲಿ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸುವಂತೆ ಬೇಡಿಕೆಯೊಂದು ಮತ್ತೆ ಕೇಳಿಬಂದಿದೆ. ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದಾರೆ.
ಪ್ರವೀಣ್ ಖಂಡೇಲ್ವಾಲ್ ತಮ್ಮ ಪತ್ರದಲ್ಲಿ, “ದೆಹಲಿ ಎಂಬ ಹೆಸರು ಬದಲಾಯಿಸುವುದು ಭಾರತದ ಆತ್ಮ, ಐತಿಹಾಸಿಕ ಸಂಪ್ರದಾಯ ಮತ್ತು ಪರಂಪರೆಯ ಪುನರುಜ್ಜೀವನದ ಸಂಕೇತವಾಗುತ್ತದೆ” ಎಂದು ತಿಳಿಸಿದ್ದಾರೆ. ಅವರು ಪತ್ರದಲ್ಲಿ ಉಲ್ಲೇಖಿಸಿರುವಂತೆ, ಮಹಾಭಾರತದ ಕಾಲದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ಇಂದ್ರಪ್ರಸ್ಥ ಎಂಬ ರಾಜಧಾನಿಯನ್ನು ಸ್ಥಾಪಿಸಿದ್ದರು ಎಂಬ ಐತಿಹಾಸಿಕ ದಾಖಲೆಗಳಿವೆ.
ನಂತರ ಈ ನಗರ ವ್ಯಾಪಾರ, ಸಂಸ್ಕೃತಿ ಮತ್ತು ಆಡಳಿತದ ಕೇಂದ್ರವಾಯಿತು. ಸುಲ್ತಾನರು ಹಾಗೂ ಮೊಘಲ್‌ಗಳ ಕಾಲದಲ್ಲಿ ಈ ಹೆಸರನ್ನು ‘ದೆಹಲಿ’ ಎಂದು ಬದಲಾಯಿಸಲಾಯಿತು. ನಂತರ 1911ರಲ್ಲಿ ಬ್ರಿಟಿಷರು ನವದೆಹಲಿಯನ್ನು ರಾಜಧಾನಿಯಾಗಿ ಘೋಷಿಸಿದರು.
ಪ್ರವೀಣ್ ಖಂಡೇಲ್ವಾಲ್ ಅವರ ಪತ್ರದ ನಾಲ್ಕು ಬೇಡಿಕೆಗಳು:
1. ಭಾರತದ ರಾಜಧಾನಿ ದೆಹಲಿಯ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಬೇಕು.
2. ಹಳೆ ದೆಹಲಿ ರೈಲು ನಿಲ್ದಾಣವನ್ನು ‘ಇಂದ್ರಪ್ರಸ್ಥ ಜಂಕ್ಷನ್’ ಎಂದು ಮರುನಾಮಕರಣ ಮಾಡಬೇಕು.
3. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಇಂದ್ರಪ್ರಸ್ಥ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು.
4. ದೆಹಲಿಯ ಪ್ರಮುಖ ಸ್ಥಳವೊಂದರಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು.
ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್‌ರಾಜ್ ನಗರಗಳು ತಮ್ಮ ಪ್ರಾಚೀನ ಗುರುತನ್ನು ಮರಳಿ ಪಡೆದಂತೆ, ದೆಹಲಿಯು ತನ್ನ ಮೂಲ ಹೆಸರಿಗೆ ಮರಳುವುದರಿಂದ ಸಂಸ್ಕೃತಿ ಶ್ರೀಮಂತವಾಗುತ್ತದೆ. ಇದರಿಂದ ರಾಜಧಾನಿಯ ಪ್ರವಾಸೋದ್ಯಮವೂ ಉತ್ತೇಜನ ಪಡೆಯುತ್ತದೆ” ಎಂದು ಹೇಳಿದ್ದಾರೆ.


