ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಹಿರಿಮೆ ಸಾರುವ ಸುಂದರ ಸಂಗೀತ ಕಾರ್ಯಕ್ರಮ ನಗರದ ಭಾರತರತ್ನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಸೋಮವಾರ ನಡೆಯಿತು.
ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ, ಗಾಯಕ ಡಾ. ಶ್ರೀರಾಮ ಕಾಸರ್, ತಬಲಾ ವಾದಕ ವಿಜಯಕುಮಾರ್, ಕೀಬೋರ್ಡ್ ವಾದಕ ಬಸವರಾಜ್, ರಿದಮ್ ಪ್ಯಾಡ್ ವಾದಕ ನಂದೀಶ್ ಬುವ ಮೊದಲಾದ ಪ್ರತಿಭಾವಂತ ಕಲಾವಿದರು ತಮ್ಮ ಮನಮೋಹಕ ಗಾಯನ ಮತ್ತು ವಾದ್ಯ ಕೌಶಲ್ಯದಿಂದ ಪ್ರೇಕ್ಷಕರ ಹೃದಯ ಗೆದ್ದರು.
ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಎಂಬ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜನ್–ನಾಗೇಂದ್ರ ಸಂಯೋಜನೆಯ ಈ ದೇಶ ಚೆನ್ನಾ ಈ ಮಣ್ಣು ಚಿನ್ನ’ ಗೀತೆಯನ್ನು ಡಾ. ಶ್ರೀರಾಮ ಕಾಸರ್ ಭಾವಪೂರ್ಣವಾಗಿ ಹಾಡಿ, ಹಾಲ್‌ನಲ್ಲಿದ್ದ ಪ್ರೇಕ್ಷಕರಲ್ಲಿ ದೇಶಭಕ್ತಿ ಮತ್ತು ಹೆಮ್ಮೆಯ ಜ್ವಾಲೆ ಉಕ್ಕಿಸಿದರು.
ಶಿಶುನಾಳ ಶರೀಫರ ಜನಪ್ರೀಯ ಗೀತೆಗಳಾದ ತರವಲ್ಲ ತಗಿ ನಿನ್ನ ತಂಬೂರಿಸ್ವರ, ಸೋರುತಿಹುದು ಮನೆಯ ಮಾಳಿಗೆ ಹಾಗೂ ಕೋಡಗನ ಕೋಳಿ ನುಂಗಿತ್ತ ಗೀತೆಗಳು ಜನಮನದಾಳದಲ್ಲಿ ಕನ್ನಡ ನುಡಿಯ ಹಿರಿಮೆ ಮೂಡಿಸಿ, ಸಂಸ್ಕೃತಿಯ ಸೂಕ್ಷ್ಮ ಬಣ್ಣಗಳನ್ನು ಜೀವಂತಗೊಳಿಸಿದವು.
ಕನ್ನಡದ ಚಿರಸ್ಮರಣೀಯ ನಟ ಡಾ. ರಾಜಕುಮಾರ ಅವರ ಆಕಾಶಮಿಕ್ಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಜನಮನದ ಗೀತೆ ವೇದಿಕೆಯಲ್ಲಿ ನಾದಸಾಗರ ಸೃಷ್ಟಿಸಿತು. ಕಾರ್ಯಕ್ರಮದ ಅಂತ್ಯದಲ್ಲಿ ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ’ ಹಾಗೂ `ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ’ ಎಂಬ ಗೀತೆಗಳು ಶಾಂತಿ, ಸೌಹಾರ್ದ ಮತ್ತು ನಾಡಿನ ಏಕತೆಯ ಸಂದೇಶ ನೀಡಿದವು.


