ಬೆಂಗಳೂರು:- ನಿವೃತ್ತ ಅಧಿಕಾರಿಯ ಮಗಳ ಹೆಣ ಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇನ್ಸ್‌ಪೆಕ್ಟರ್ ಓರ್ವನನ್ನು ಅಮಾನತು ಮಾಡಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಬೆಳ್ಳಂದೂರು ಠಾಣೆಯ ರಮೇಶ್ ರೊಟ್ಟಿ ಅಮಾನತುಗೊಂಡ ಇನ್ಸ್ಪೆಕ್ಟರ್. ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್ ಅವರು, ನನ್ನ ಮಗಳ ಹೆಣ ಕೊಡಲು ಪೊಲೀಸರು ಕೊಟ್ಟ ನೋವು ಅಷ್ಟಿಷ್ಟಲ್ಲ. ಮಗಳ ಸತ್ತ ನೋವು ನಮ್ಮಲ್ಲಿದ್ದಾಗಲೇ ಪೊಲೀಸರು ಲಂಚದ ಹಣಕ್ಕಾಗಿ ಕೈಯೊಡ್ಡಿದ್ದರು. ಪೋಸ್ಟ್ ಮಾರ್ಟಂ, ಆಂಬುಲೆನ್ಸ್, ಯುಡಿಆರ್ ಸರ್ಟಿಫಿಕೇಟ್ ಹೀಗೆ ಎಲ್ಲಾ ಕಡೆ ಹಣ ಕೀಳುವ ಕೆಲಸ ಮಾಡಿದ್ದರು. ಇನ್ಸ್‌ಪೆಕ್ಟರ್ ಸೌಜನ್ಯದಿಂದ ನನ್ನ ಜೊತೆ ವರ್ತಿಸಿಲ್ಲ ಎಂದು ಆರೋಪಿಸಿದ್ದರು.
ಆರೋಪ ಕೇಳಿಬಂದಾಗ ಘಟನೆ ಬಗ್ಗೆ ವರದಿ ನೀಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್‌ಗೆ ಸೂಚನೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೈಟ್‌ಫೀಲ್ಡ್ ಸೆನ್ ಎಸಿಪಿ ಬಾಲಕೃಷ್ಣ ಮೂರು ದಿನಗಳ ಹಿಂದೆಯೇ ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಕರ್ತವ್ಯಲೋಪ ಹಿನ್ನೆಲೆ ಬೆಳ್ಳಂದೂರು ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿಯನ್ನು ಅಮಾನತು ಮಾಡಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.


