ಬೆಂಗಳೂರು: ಚಿನ್ನದ ದರ ಏರಿಕೆಯ ಪರಿಣಾಮವಾಗಿ ರಾಜ್ಯದಲ್ಲಿ ಚಿನ್ನಾಭರಣ ಖರೀದಿ ಗಣನೀಯವಾಗಿ ಇಳಿಕೆಯಾಗಿದ್ದು, ವ್ಯಾಪಾರಿಗಳು ಮತ್ತು ಅಕ್ಕಸಾಲಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಖರೀದಿ ಶಕ್ತಿ ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಪ್ರಧಾನಿಗಳ ಇತ್ತೀಚಿನ ಆರ್ಥಿಕ ಮಿತವ್ಯಯ ಸಲಹೆಯ ಬಳಿಕ ಖರೀದಿ ಮತ್ತಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಈ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿಯೇ ಸುಮಾರು 30% ವ್ಯಾಪಾರ ಕುಸಿತ ದಾಖಲಾಗಿದ್ದು, ಕಳೆದ ಕೆಲ ತಿಂಗಳಿನಿಂದ ಒಟ್ಟಾರೆ ಚಿನ್ನದ ವ್ಯಾಪಾರವು 50%ಕ್ಕೂ ಹೆಚ್ಚು ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ವರ್ಷಪೂರ್ತಿ ನಡೆಯುವ ವ್ಯಾಪಾರವೂ ಇದೀಗ ತೀವ್ರವಾಗಿ ಕುಸಿದಿದೆ ಎಂದು ಜುವೆಲ್ಲರಿ ಮಾಲೀಕರು ಹೇಳಿದ್ದಾರೆ.
ಚಿನ್ನಾಭರಣಗಳ ಬೇಡಿಕೆ ಕಡಿಮೆಯಾದ ಕಾರಣ ತಯಾರಿಕಾ ಕಾರ್ಯ ಕೂಡ ಕುಂಠಿತಗೊಂಡಿದ್ದು, ಅಕ್ಕಸಾಲಿಗರಿಗೂ ಕೆಲಸದ ಕೊರತೆ ಎದುರಾಗಿದೆ. ದಿನನಿತ್ಯ ಕೆಲಸಕ್ಕಾಗಿ ಅಂಗಡಿಗಳಿಂದ ಅಂಗಡಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಕ್ಕಸಾಲಿಗರು ತಿಳಿಸಿದ್ದಾರೆ.
ಒಟ್ಟಾರೆ, ಚಿನ್ನದ ದರ ಏರಿಕೆ ಒಂದು ಕಡೆ ವ್ಯಾಪಾರವನ್ನು ಕುಗ್ಗಿಸುತ್ತಿದ್ದರೆ, ಮತ್ತೊಂದು ಕಡೆ ಈ ಉದ್ಯಮದ ಮೇಲೆ ಅವಲಂಬಿತ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೂ ಪರಿಣಾಮ ಬೀರುತ್ತಿದೆ.



