2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಇನ್ನೂ ಸಾಕಷ್ಟು ಸಮಯವಿದ್ದರೂ, ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂಡಗಳನ್ನು ಬಲಪಡಿಸುವ ಕೆಲಸ ಆರಂಭಿಸಿವೆ.
ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಮಹತ್ವದ ಆಟಗಾರರ ವಿನಿಮಯದ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಗಮನ ಸೆಳೆದಿವೆ.
ಐಪಿಎಲ್ 2026ರಲ್ಲಿ ಪ್ಲೇಆಫ್‌ವರೆಗೆ ತಲುಪಿದ್ದ ಸನ್‌ರೈಸರ್ಸ್ ಹೈದರಾಬಾದ್, ಎಲಿಮಿನೇಟರ್‌ನಲ್ಲಿ ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿತ್ತು. ಮುಂದಿನ ಸೀಸನ್‌ನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸುತ್ತಿದೆ.
ಜಿತೇಶ್ ಶರ್ಮಾ ಮೇಲೆ ಎಸ್‌ಆರ್‌ಎಚ್ ಕಣ್ಣು:
ತಂಡದ ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಬಲ್ಲ ಭಾರತೀಯ ಫಿನಿಷರ್ ಕೊರತೆಯನ್ನು ನೀಗಿಸಲು ಎಸ್‌ಆರ್‌ಎಚ್, ಆರ್‌ಸಿಬಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಉಪನಾಯಕ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ ಎನ್ನಲಾಗಿದೆ.
ಆರ್‌ಸಿಬಿಯ ಪ್ರತಿಬೇಡಿಕೆ ಏನು?
ವರದಿಗಳ ಪ್ರಕಾರ, ಜಿತೇಶ್ ಶರ್ಮಾ ಅವರನ್ನು ಬಿಟ್ಟುಕೊಡಲು ಸಿದ್ಧವಿರುವ ಆರ್‌ಸಿಬಿ, ಬದಲಿಗೆ ಎಸ್‌ಆರ್‌ಎಚ್‌ನ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ನೀಡುವಂತೆ ಕೇಳಿದೆ. ಈ ಬೇಡಿಕೆ ಹೈದರಾಬಾದ್ ಮ್ಯಾನೇಜ್‌ಮೆಂಟ್‌ಗೆ ಅಚ್ಚರಿ ಮೂಡಿಸಿದ್ದು, ಎರಡೂ ಫ್ರಾಂಚೈಸಿಗಳ ನಡುವೆ ಮಾತುಕತೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ರನ್ನು ಬಿಟ್ಟುಕೊಡುವುದು ಎಸ್‌ಆರ್‌ಎಚ್‌ಗೆ ದೊಡ್ಡ ಹೊಡೆತವಾಗಬಹುದು. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಇಶಾನ್, ಭವಿಷ್ಯದ ನಾಯಕತ್ವದ ಪ್ರಮುಖ ಆಯ್ಕೆಯಾಗಿ ಪರಿಗಣಿಸಲ್ಪಡುತ್ತಿದ್ದಾರೆ. ಜೊತೆಗೆ, ಮುಂದಿನ ಸೀಸನ್‌ನಲ್ಲಿ ಕಮ್ಮಿನ್ಸ್ ಲಭ್ಯತೆ ಕುರಿತು ಅನಿಶ್ಚಿತತೆ ಇರುವುದರಿಂದ ಇಶಾನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಎಂದು ವರದಿಗಳು ಸೂಚಿಸುತ್ತಿವೆ.
ಸದ್ಯ ಈ ಟ್ರೇಡ್ ಕುರಿತಂತೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಈ ಮಾತುಕತೆ ಐಪಿಎಲ್ 2027ರ ಮುನ್ನ ಕುತೂಹಲ ಕೆರಳಿಸಿದೆ.



