ಭೋಪಾಲ್: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ಸಿಡಿಮದ್ದನ್ನು ರಸಗುಲ್ಲಾ ಎಂದು ಭಾವಿಸಿ ತಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು 35 ವರ್ಷದ ರಾಜೇಂದ್ರ ಬಾರೌತಿಯಾ ಎಂದು ಗುರುತಿಸಲಾಗಿದೆ. ನವೆಂಬರ್ 10ರಂದು ಈ ಘಟನೆ ಬೆಳಕಿಗೆ ಬಂದಿದ್ದು, ತಡವಾಗಿ ವರದಿಯಾಗಿದೆ.
ಗ್ರಾಮಸ್ಥರು ಬೆಂಕಿಯ ಸುತ್ತ ಕುಳಿತುಕೊಂಡಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ರಾಜೇಂದ್ರ ಅವರಿಗೆ ಸ್ಫೋಟಕವೊಂದನ್ನು ನೀಡಿದ್ದಾರೆ ಎನ್ನಲಾಗಿದೆ. ಅದನ್ನು ಸಿಹಿತಿಂಡಿ ರಸಗುಲ್ಲಾ ಎಂದು ಭಾವಿಸಿದ ರಾಜೇಂದ್ರ ಬಾಯಿಗೆ ಹಾಕಿಕೊಂಡಿದ್ದಾರೆ. ಈ ವೇಳೆ ಅವರ ಬಾಯಲ್ಲೇ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ರಾಜೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾಡುಹಂದಿ ಬೇಟೆಗೆ ಬಳಸುತ್ತಿದ್ದ ಸ್ಫೋಟಕ!
ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯದ ಕೆಲವು ಪ್ರದೇಶಗಳಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ಇಂತಹ ಕಚ್ಚಾ ಸ್ಫೋಟಕಗಳನ್ನು ಬಳಸಲಾಗುತ್ತದೆ ಎಂದು ವರದಿಯಾಗಿದೆ. ಪಟಾಕಿ ಅಥವಾ ಕಲ್ಲುಗಣಿಗಳಲ್ಲಿ ಬಳಸುವ ಗನ್ಪೌಡರ್ ಅನ್ನು ಹಿಟ್ಟಿನ ಉಂಡೆಗಳಲ್ಲಿ ತುಂಬಿ ಇಂತಹ ಸ್ಫೋಟಕಗಳನ್ನು ತಯಾರಿಸಲಾಗುತ್ತದೆ. ಇವುಗಳ ಆಕಾರ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾದ ರಸಗುಲ್ಲಾವನ್ನು ಹೋಲುತ್ತದೆ ಎನ್ನಲಾಗಿದೆ.
ಈ ಘಟನೆ ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಸ್ಫೋಟಕ ನೀಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









