ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದಲ್ಲಿ ನವೆಂಬರ್ 14ರಿಂದ ಸಾರ್ವಜನಿಕರ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ಈ ಮಾರ್ಗದಲ್ಲಿ ರೈಲುಗಳ ಸಂಚಾರದ ಸಮಯ, ಮೊದಲ ಮತ್ತು ಕೊನೆಯ ರೈಲಿನ ವಿವರ ಹಾಗೂ ರೈಲುಗಳ ನಡುವಿನ ಅಂತರವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 13) ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯವರೆಗಿನ ಪಿಂಕ್ ಲೈನ್ ಎತ್ತರಿಸಿದ ಮಾರ್ಗವನ್ನು ಉದ್ಘಾಟಿಸಿ ಹಸಿರು ನಿಶಾನೆ ತೋರಿಸಿದ್ದಾರೆ. ಉದ್ಘಾಟನೆಯ ಬಳಿಕ ಸ್ವತಃ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದರ ಬೆನ್ನಲ್ಲೇ ನಾಳೆ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ವಾಣಿಜ್ಯ ಸೇವೆ ಲಭ್ಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪಿಂಕ್ ಲೈನ್ ಮೆಟ್ರೋ ಮೊದಲ ರೈಲು ಸಮಯ:
ನಾಳೆ (ನವೆಂಬರ್ 14) ಆರಂಭಿಕ ದಿನವಾಗಿರುವುದರಿಂದ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 6 ಗಂಟೆಗೆ ಮೊದಲ ರೈಲು ಹೊರಡಲಿದೆ. ಅಂದು ಪ್ರತಿ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.
ವಾರದ ದಿನಗಳಿಗೆ ಅನುಗುಣವಾಗಿ ರೈಲುಗಳ ಮೊದಲ ಸಂಚಾರದ ಸಮಯದಲ್ಲಿ ಬದಲಾವಣೆ ಇರಲಿದೆ. ಸೋಮವಾರ ಕಾಳೇನ ಅಗ್ರಹಾರದಿಂದ ಬೆಳಿಗ್ಗೆ 4:55ಕ್ಕೆ ಹಾಗೂ ಎಸ್.ಜಿ. ಪಾಳ್ಯದಿಂದ ಬೆಳಿಗ್ಗೆ 5 ಗಂಟೆಗೆ ಮೊದಲ ರೈಲು ಹೊರಡಲಿದೆ. ಮಂಗಳವಾರದಿಂದ ಶನಿವಾರದವರೆಗೆ ಎರಡೂ ನಿಲ್ದಾಣಗಳಿಂದ ಬೆಳಿಗ್ಗೆ 6 ಗಂಟೆಗೆ ರೈಲು ಸೇವೆ ಆರಂಭವಾಗಲಿದೆ. ಭಾನುವಾರ ಬೆಳಿಗ್ಗೆ 7 ಗಂಟೆಗೆ ಮೊದಲ ರೈಲು ಸಂಚರಿಸಲಿದೆ.
ಪೀಕ್ ಅವರ್ನಲ್ಲಿ 8 ನಿಮಿಷಕ್ಕೊಂದು ರೈಲು:
ಸೋಮವಾರದಿಂದ ಶುಕ್ರವಾರದವರೆಗೆ ಪೀಕ್ ಅವರ್ನಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ನಾನ್-ಪೀಕ್ ಅವರ್ನಲ್ಲಿ 10 ನಿಮಿಷಗಳ ಅಂತರದಲ್ಲಿ ರೈಲುಗಳು ಲಭ್ಯವಿರಲಿವೆ. ಶನಿವಾರ ಮತ್ತು ಭಾನುವಾರ ಇಡೀ ದಿನ ಪ್ರತಿ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾತ್ರಿ ಕೊನೆಯ ರೈಲು ಯಾವಾಗ?
ಪ್ರತಿದಿನ ರಾತ್ರಿ ಕಾಳೇನ ಅಗ್ರಹಾರ ನಿಲ್ದಾಣದಿಂದ 10:50ಕ್ಕೆ ಹಾಗೂ ಎಸ್.ಜಿ. ಪಾಳ್ಯ ನಿಲ್ದಾಣದಿಂದ 10:54ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ.
ಪಿಂಕ್ ಲೈನ್ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಿಎಂಆರ್ಸಿಎಲ್ ಪ್ರಕಟಿಸಿರುವ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬಹುದಾಗಿದೆ.









