ಹಾಸನ: ಕ್ಷುಲ್ಲಕ ಕಾರಣಕ್ಕೆ ಜಿಮ್ನಲ್ಲಿ ನಡೆದ ಭೀಕರ ಹಲ್ಲೆ ಘಟನೆಯೊಂದು ಹಾಸನ ನಗರವನ್ನು ಬೆಚ್ಚಿಬೀಳಿಸಿದೆ.
ನಗರದ ಎಂ.ಜೆ. ಫಿಟ್ನೆಸ್ ಜಿಮ್ನಲ್ಲಿ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ವ್ಯಾಯಾಮ ಮಾಡುವ ವೇಳೆ ಅಚಾತುರ್ಯದಿಂದ ಇಬ್ಬರ ಭುಜ ತಗುಲಿದ ವಿಷಯವೇ ಗಂಭೀರ ವಾಗ್ವಾದಕ್ಕೆ ಕಾರಣವಾಗಿದೆ. ಇದನ್ನೇ ನೆಪವಾಗಿಸಿಕೊಂಡ ವರುಣ್ ಎಂಬಾತ ಕೋಪಗೊಂಡು ಕೀರ್ತನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಯ ಪರಿಣಾಮವಾಗಿ ಕೀರ್ತನ್ ತಲೆಗೆ ಗಂಭೀರ ಗಾಯವಾಗಿದ್ದು, ಆತ ಪ್ರಜ್ಞೆ ತಪ್ಪಿ ಕೋಮಾಗೆ ಜಾರಿದ್ದಾನೆ. ಪ್ರಸ್ತುತ ಗಾಯಾಳು ICUನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವರುಣ್ ವಿರುದ್ಧ ತನಿಖೆ ಆರಂಭಿಸಲಾಗಿದೆ. ಘಟನೆ ಕುರಿತು ಜಿಮ್ನ ಸಿಸಿಟಿವಿ ದೃಶ್ಯಗಳು ಪರಿಶೀಲನೆಗೆ ಒಳಪಡಿಸಲಾಗಿದೆ.
ಕ್ಷಣಿಕ ಕೋಪ ಹಾಗೂ ಅಸಹನೆಯ ಪರಿಣಾಮ ಹೇಗೆ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಎಚ್ಚರಿಕೆಯ ಉದಾಹರಣೆಯಾಗಿದೆ.



