ಧಾರವಾಡ: ಹೆಚ್ಚು ಮೊಬೈಲ್ ಬಳಕೆ ಮಾಡಬೇಡ, ರೀಲ್ಸ್ ನೋಡುವುದನ್ನು ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ್ (20) ಎಂದು ಗುರುತಿಸಲಾಗಿದೆ. ಮೇಘಾ ಧಾರವಾಡದ ಖಾಸಗಿ ಕಾಲೇಜಿನಲ್ಲಿ ಡಿ.ಇಡಿ ವ್ಯಾಸಂಗ ಮಾಡುತ್ತಿದ್ದಳು.
ಮೇಘಾ ಹೆಚ್ಚು ಸಮಯ ಮೊಬೈಲ್ ಬಳಸುತ್ತಿದ್ದಳು ಹಾಗೂ ರೀಲ್ಸ್ ನೋಡುತ್ತಿದ್ದಳು ಎನ್ನಲಾಗಿದ್ದು, ಈ ವಿಚಾರವಾಗಿ ಆಕೆಯ ತಾಯಿ ಬುದ್ಧಿವಾದ ಹೇಳಿ ಬೈದಿದ್ದರು. ಇದರಿಂದ ಮನನೊಂದ ಮೇಘಾ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ.
ವಿಷ ಸೇವಿಸಿದ್ದ ಮೇಘಾಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.



