ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ 90ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಪತ್ತೆಯಾಗಿವೆ.
ಮೊಬೈಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಅಶ್ಲೀಲ ವೀಡಿಯೊಗಳು ಡೌನ್‌ಲೋಡ್ ಆಗಿದ್ದವು ಎನ್ನಲಾಗಿದ್ದು, ಸದ್ಯ ಅಧಿಕಾರಿಗಳು ಮೊಬೈಲ್‌ನಲ್ಲಿರುವ ಸಂಪೂರ್ಣ ಡೇಟಾವನ್ನು ಪರಿಶೀಲಿಸುತ್ತಿದ್ದಾರೆ.
ಮೊಬೈಲ್ ಸೀಜ್ ಬಳಿಕ ಪ್ರಜ್ವಲ್ ಎತ್ತಂಗಡಿ:
ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಜೈಲು ಆಡಳಿತ ಮಹತ್ವದ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈವರೆಗೆ VIP ಸೆಲ್ ಅಥವಾ VIP ಬ್ಯಾರಕ್‌ನಲ್ಲಿ ಇರಿಸಲಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಇದೀಗ ಸಾಮಾನ್ಯ ಕೈದಿಗಳಿರುವ ಜನರಲ್ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು 20 ಮಂದಿ ಕೈದಿಗಳು ಇರುವ ಬ್ಯಾರಕ್‌ಗೆ ಪ್ರಜ್ವಲ್ ಅವರನ್ನು ಶಿಫ್ಟ್ ಮಾಡಲಾಗಿದೆ ಎನ್ನಲಾಗಿದ್ದು, ಶಿಕ್ಷೆಗೆ ಗುರಿಯಾಗಿರುವ ಕೈದಿಗಳೂ ಈ ಬ್ಯಾರಕ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಜನರಲ್ ಬ್ಯಾರಕ್‌ನಲ್ಲಿ ಕೈದಿಗಳು ಸಾಮಾನ್ಯ ಸೌಲಭ್ಯಗಳನ್ನು ಹಂಚಿಕೊಳ್ಳಬೇಕಿದ್ದು, ಸುಮಾರು 20 ಮಂದಿ ಕೈದಿಗಳಿಗೆ ಒಂದೇ ಶೌಚಾಲಯದ ವ್ಯವಸ್ಥೆ ಇದೆ ಎನ್ನಲಾಗಿದೆ. ಹೀಗಾಗಿ VIP ಸೌಲಭ್ಯದಿಂದ ಹೊರಬಂದು ಸಾಮಾನ್ಯ ಕೈದಿಗಳೊಂದಿಗೆ ಒಂದೇ ಬ್ಯಾರಕ್‌ನಲ್ಲಿ ಇರುವ ಪರಿಸ್ಥಿತಿ ಪ್ರಜ್ವಲ್‌ಗೆ ಎದುರಾಗಿದೆ ಎನ್ನಲಾಗಿದೆ.
ಯೂನಿಫಾರ್ಮ್ ಧರಿಸಿ ಲೈಬ್ರರಿ ಕೆಲಸ?
ಜೈಲಿನ ನಿಯಮಾವಳಿಯಂತೆ ಪ್ರಜ್ವಲ್ ರೇವಣ್ಣ ಅವರಿಗೆ ಕಡ್ಡಾಯ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಜೈಲಿನ ಲೈಬ್ರರಿ ವಿಭಾಗದಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಕಾರಾಗೃಹ ನಿಯಮಗಳಡಿ ಕೈದಿಗಳಿಗೆ ವಹಿಸುವ ಕೆಲಸದ ಭಾಗವಾಗಿ ಲೈಬ್ರರಿ ಕೆಲಸ ನೀಡಲಾಗಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಅವರು ಜೈಲಿನ ಸಮವಸ್ತ್ರದಲ್ಲೇ ಈ ಕೆಲಸ ನಿರ್ವಹಿಸಬೇಕಾಗಬಹುದು.
ಮೊಬೈಲ್ ಸೀಜ್ ಮಾಡುವಾಗ ಮನವಿ?
ಮೊಬೈಲ್ ಫೋನ್‌ನ್ನು ಅಧಿಕಾರಿಗಳು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರು ತಪ್ಪಾಗಿದೆ, ಮೊಬೈಲ್‌ನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಅಧಿಕಾರಿಗಳು ಯಾವುದೇ ಮನವಿಗೆ ಮಣಿಯದೆ ಮೊಬೈಲ್‌ನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.
ಮೊಬೈಲ್ ಜೈಲಿನೊಳಗೆ ಹೇಗೆ ಬಂದಿತು? ಅದನ್ನು ಪ್ರಜ್ವಲ್‌ಗೆ ಯಾರು ನೀಡಿದರು? ಮೊಬೈಲ್ ಬಳಕೆಗೆ ಯಾರಾದರೂ ನೆರವು ನೀಡಿದ್ದರೇ? ಎಂಬ ಹಲವು ಪ್ರಶ್ನೆಗಳು ಇದೀಗ ಎದ್ದಿವೆ. ಈ ಎಲ್ಲಾ ಅಂಶಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ.
ಮೊಬೈಲ್‌ನಲ್ಲಿರುವ ಡೇಟಾ ಪರಿಶೀಲನೆ:
ಮೊಬೈಲ್‌ನಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ 90ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳ ಜೊತೆಗೆ ಇತರ ಡಿಜಿಟಲ್ ಡೇಟಾವನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ ಎನ್ನಲಾಗಿದೆ. ವೀಡಿಯೊಗಳು ಯಾವಾಗ ಡೌನ್‌ಲೋಡ್ ಆಗಿವೆ, ಅವುಗಳ ಮೂಲವೇನು ಮತ್ತು ಮೊಬೈಲ್ ಅನ್ನು ಎಷ್ಟು ಸಮಯ ಬಳಸಲಾಗಿದೆ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸುವ ಸಾಧ್ಯತೆಯಿದೆ.
ಇದಲ್ಲದೆ, ಅರೆಬರೆ ಬಟ್ಟೆ ಧರಿಸಿರುವ ಯುವತಿಯರ ಚಿತ್ರಗಳಿರುವ ಪತ್ರಿಕೆಗಳ ಕಟಿಂಗ್ಸ್‌ಗಳನ್ನು ಪ್ರಜ್ವಲ್ ಬಳಿ ಇಟ್ಟುಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಜೈಲಿನೊಳಗೆ ಮೊಬೈಲ್ ಫೋನ್ ಪತ್ತೆಯಾಗಿರುವುದು ಮತ್ತು ಅದರಲ್ಲಿ ಅಶ್ಲೀಲ ವೀಡಿಯೊಗಳಿವೆ ಎಂಬ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ. ಮೊಬೈಲ್‌ನಲ್ಲಿರುವ ಡೇಟಾದ ಸಂಪೂರ್ಣ ಪರಿಶೀಲನೆ ಹಾಗೂ ಅಧಿಕಾರಿಗಳ ಅಧಿಕೃತ ತನಿಖಾ ವರದಿ ಹೊರಬಂದ ಬಳಿಕವಷ್ಟೇ ಈ ಆರೋಪಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.



