ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ತಡೆ ನೀಡಲಾಗಿದೆ. ರಾಜ್ಯ ಹೈಕೋರ್ಟ್ ಸೂಚನೆಯಂತೆ ಇಂದು ಬೆಂಗಳೂರಿನಲ್ಲಿ 2ನೇ ಹಂತದ ಶಾಂತಿ ಸಭೆ ನಡೆಯಲಿದೆ. ಹೈಕೋರ್ಟ್ ಬೆಂಗಳೂರು ಪೀಠದ ಅಡ್ವಕೇಟ್ ಜನರಲ್ ಕಚೇರಿಯಲ್ಲಿ ಶಾಂತಿಸಭೆ ನಡೆಯಲಿದೆ.
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವ ಪಡೆದಿದೆ. ಹೈಕೋರ್ಟ್ ಆದೇಶದಂತೆ, ರಾಜ್ಯದ ಅಡ್ವೋಕೇಟ್ ಜನರಲ್ (AG) ಶಶಿಕಿರಣ ಶೆಟ್ಟಿ ಅವರ ನೇತೃತ್ವದಲ್ಲಿ ಈ ಶಾಂತಿ ಸಭೆ ನಡೆಯಲಿದೆ.
ಆರ್‌ಎಸ್‌ಎಸ್ ಪರವಾಗಿ ಅರ್ಜಿದಾರರಾದ ಅಶೋಕ ಪಾಟೀಲ್ ಸೇರಿ ಐದು ಜನರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಗಿದೆ.ಅರ್ಜಿದಾರ ಅಶೋಕ ಪಾಟೀಲ್, ಕೃಷ್ಣಾ ಜೋಶಿ, ಪ್ರಹ್ಲಾದ್ ವಿಶ್ವಕರ್ಮ ಹಾಗೂ ಆರ್‌ಎಸ್‌ಎಸ್ ಪರ ವಕೀಲ ಅರುಣ್ ಶ್ಯಾಮ್ ಮತ್ತು ವಾದಿರಾಜ್ ಕಾಡ್ಲೂರು ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿವೆ.



