ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0
Spread the love

ಬೆಂಗಳೂರು: ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Advertisement

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನವೆಂಬರ್ 19 ರಂದು ನಡೆಯಲಿರುವ ಐ.ಸಿ.ಡಿ.ಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕಾ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ಡಾ.ಬಾಬು ಜಗಜೀವನರಾಮ್ ಆಡಿಟೋರಿಯಂ ಮತ್ತು ತರಬೇತಿ ಕೇಂದ್ರದಲ್ಲಿ ಬುಧವಾರ ರಾಜ್ಯಮಟ್ಟದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಐಸಿಡಿಎಸ್ ಕಾರ್ಯಕ್ರಮಗಳ ಬಗ್ಗೆ ಸಲಹೆ, ಸಹಕಾರ ಕೋರಿ ಈ ಸಭೆ ಕರೆಯಲಾಗಿದ್ದು, ಅಂದಿನ ಕಾರ್ಯಕ್ರಮಕ್ಕೆ ಸುಮಾರು 40 ಸಾವಿರಕ್ಕೂ ಅಧಿಕ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲೇ ಬ್ಯಾಂಕ್ ಜನಮನ್ನಣೆ ಗಳಿಸಲಿ

ವಿಶ್ವದಲ್ಲೇ ದೊಡ್ಡದಾದ ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ. 2000 ಜನ ಫಲಾನುಭವಿಗಳ ಹಣ ಸಂಗ್ರಹಿಸಲಾಗಿದ್ದು,

ಇದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೆ ಗೃಹಲಕ್ಷ್ಮಿ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮ ಹಾಕಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮಿ ಸೊಸೈಟಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಗೃಹಲಕ್ಷ್ಮಿ ಸೊಸೈಟಿ ಮೂಲಕ ಮೂರು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಲೋನ್ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು. ಗೃಹಲಕ್ಷ್ಮಿ ಯಶಸ್ಸಿಗೆ ಯಾವ ರೀತಿ ಎಲ್ಲರೂ ಶ್ರಮ ವಹಿಸಿದ್ದೀರೋ ಹಾಗೆಯೇ ಗೃಹಲಕ್ಷ್ಮಿ ಸೊಸೈಟಿಯ ಯಶಸ್ಸಿಗೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.‌


Spread the love

LEAVE A REPLY

Please enter your comment!
Please enter your name here