ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾಕಾನೆ ಪಾರ್ಥಸಾರಥಿ ಓಡಾಡಿದ್ದರಿಂದ ಆತಂಕದಲ್ಲಿ ಜನರು ದಿಕ್ಕಾಪಾಲಾಗಿ ಓಡಿದ ಘಟನೆ ಜರುಗಿದೆ.
ಇಂದು (ಶುಕ್ರವಾರ) ಗುಂಡ್ಲುಪೇಟೆ ತಾಲೂಕಿನ ಸಂಪಿಗೆಪುರ ಸುತ್ತಮುತ್ತಲು ಹುಲಿ ಸೆರೆ ಕಾರ್ಯಾಚರಣೆಗೆ ಕರೆತರಲಾಗಿತ್ತು. ಸಂಜೆ ಕೆರೆಯಲ್ಲಿ ನೀರು ಕುಡಿಯಲು ಕರೆತಂದಾಗ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಸಾಕಾನೆಯು ಓಡಿ ಪಟ್ಟಣಕ್ಕೆ ಎಂಟ್ರಿಕೊಟ್ಟಿದೆ. ಪಟ್ಟಣದ ಬಸ್ ನಿಲ್ದಾಣ ಪೊಲೀಸ್ ಠಾಣೆ ರಸ್ತೆ ಹೀಗೆ ವಿವಿಧೆಡೆ ಓಡಾಡಿದ್ದು ಆನೆ ಕಂಡ ಜನರು ಆತಂಕಕ್ಕೊಳಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ.
ಪೊಲೀಸ್ ಠಾಣಾ ಮುಂಭಾಗದ ರಸ್ತೆ ಮಾರ್ಗವಾಗಿ ಮಡಹಳ್ಳಿ ಕಡೆ ಪಾರ್ಥಸಾರಥಿ ಇದೆ ಎಂಬ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಸೆರೆಗೆ ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.



