ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಅಂತಿಮ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಇದರ ಪರಿಣಾಮವಾಗಿ, ಭಾರತ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ.
ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮಳೆ ಕಾರಣದಿಂದ ಪಂದ್ಯ ತಡವಾಗಿ ಆರಂಭವಾಯಿತು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 4.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್‌ಗಳನ್ನು ಕಲೆಹಾಕಿತು.
ಓಪನರ್‌ಗಳಾದ ಅಭಿಷೇಕ್ ಶರ್ಮಾ 23 ರನ್ ಹಾಗೂ ಶುಭಮನ್ ಗಿಲ್ 29 ರನ್ (ಔಟಾಗದೆ) ಗಳಿಸಿದ್ದರು. ಇದೇ ವೇಳೆ ಮತ್ತೆ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಪಡಿಸಿತು. ನಂತರ ಹವಾಮಾನ ಸುಧಾರಿಸದ ಕಾರಣ ಪಂದ್ಯವನ್ನು ರದ್ದು ಘೋಷಿಸಲಾಯಿತು. ಈ ಮೂಲಕ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಸತತ ಐದನೇ ಟಿ20 ಸರಣಿ ಗೆದ್ದ ದಾಖಲೆಯನ್ನು ನಿರ್ಮಿಸಿದೆ.
ಇದರೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲಿ ಸತತ ಐದನೇ ಟಿ20 ಸರಣಿಯನ್ನು ಗೆಲ್ಲುವ ಮೂಲಕ ತನ್ನ ಅಜೇಯ ಓಟದ ದಾಖಲೆಯನ್ನು ಉಳಿಸಿಕೊಂಡಿದೆ. ಇದಲ್ಲದೆ, 2023 ರಿಂದ ಟೀಂ ಇಂಡಿಯಾ ಯಾವುದೇ ಟಿ20ಐ ಸರಣಿಯನ್ನು ಕಳೆದುಕೊಂಡಿಲ್ಲ.
ಈ ಗೆಲುವು ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೂ ವಿಶೇಷವಾಗಿದೆ. ಏಕೆಂದರೆ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ, ಆ ಬಳಿಕ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿತು. ಇದರ ಫಲವಾಗಿ ಭಾರತಕ್ಕೆ ಟಿ20 ಸರಣಿ ಲಭಿಸಿತು.


