ವಿಜಯಸಾಕ್ಷಿ ಸುದ್ದಿ, ಯಾದಗಿರಿ
ಸಚಿವ ಸ್ಥಾನ ಸಿಗದಿದ್ದಕ್ಕೆ ನಿನ್ನೆಯಷ್ಟೇ ಪಕ್ಷದ ವಿರುದ್ದ ಸಿಡಿದೆದ್ದಿದ್ದ ಶಾಸಕ ರಾಜೂಗೌಡ ಇಂದು ಯೂ ಟರ್ನ್ ಹೊಡೆದಿದ್ದು, ನಾನು ತೃಪ್ತ ಶಾಸಕ, ಅತೃಪ್ತ ಶಾಸಕನಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ ಎಂದು ಹೇಳಿದ್ದಾರೆ.
ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಮಯ ರಾಜಭವನಕ್ಕೆ ಹೋಗುವತನಕ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ, ಒಳಗಡೆ ಇರುವುದಿಲ್ಲ. ಸ್ವಲ್ಪ ಅದೃಷ್ಟದ ಕೊರತೆಯಿದೆ. ಒಳ್ಳೆಯ ರೀತಿಯಿಂದ ಪಕ್ಷದಲ್ಲಿ ಕೆಲಸ ಮಾಡೋಣ. ಮಾಡಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದರು.
ಯಾವುದೆ ಕಾಂಟ್ರವರ್ಸಿ, ಕಳಂಕ ಇಲ್ಲದ ಕಾರಣ ನನಗೂ ಸಚಿವ ಸ್ಥಾನ ಕೊಡುತ್ತಾರೆಂಬ ನಂಬಿಕೆ, ಆಶೆಯಿತ್ತು. ಸಚಿವ ಸ್ಥಾನ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಹಾಕಿದ್ದೆ. ಮಾಡದಿದ್ದಾಗ ಪಕ್ಷದ ವಿರುದ್ಧ ಮಾತನಾಡುವ ಸ್ವಭಾವ ನನ್ನದಲ್ಲ. ಪಕ್ಷಕ್ಕೆ ಬ್ಲಾಕ್ ಮೇಲೆ ಮಾಡುವಂತೆ ನನ್ನ ತಾಯಿ ಕಲಿಸಿಕೊಟ್ಟಿಲ್ಲ. ಒಳ್ಳೆಯತನದಿಂದ ಹೋಗು ಎಂದು ಕಲಿಸಿದ್ದಾರೆ. ಬಸವಣ್ಣ ಹಾಗೂ ತಾಯಿಯ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದು ರಾಜೂಗೌಡ ಹೇಳಿದ್ದಾರೆ