ಕೊಡಗು: ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ತೋಟದಲ್ಲಿ ನಡೆದಿದೆ. ರಾಮನಾಥಪುರದ ಹನುಮಂತ (57) ಮೃತ ದುರ್ದೈವಿಯಾಗಿದ್ದು, ಕಾಡಾನೆ ದಾಳಿಯಿಂದ ಮೃತರ ಎದೆ ಮತ್ತು ಹೊಟ್ಟೆಯ ಮೇಲೆ ತೀವ್ರ ಗಾಯಗಳಾಗಿದ್ದವು ಎಂದು ಕಂಡುಬಂದಿದೆ.
ಹನುಮಂತ ಕಳೆದ 30 ವರ್ಷಗಳಿಂದ ಖಾಸಗಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಲೈನ್ ಹೌಸ್‌ನಲ್ಲಿ ವಾಸಿಸುತ್ತಿದ್ದರು. ತೋಟದ ಮಾಲೀಕರು ಅವರನ್ನು ಆನೆ ಟ್ರ್ಯಾಕರ್ ಆಗಿ ನಿಯೋಜಿಸಿದ್ದರು. ಆನೆಗಳ ಉಪಸ್ಥಿತಿಯ ಬಗ್ಗೆ ಇತರ ಕಾರ್ಮಿಕರಿಗೆ ಎಚ್ಚರಿಕೆ ನೀಡುವ ಕೆಲಸ ಅವರದಾಗಿತ್ತು. ಇದೇ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅವರ ಸಹ ಕಾರ್ಮಿಕ ಅದೃಷ್ಟವಷಾತ್ ಈ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶವಪರೀಕ್ಷೆಯ ನಂತರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


