ನವದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭೀಕರ ಸ್ಫೋಟವೂ ದೇಶವನ್ನೇ ನಡುಗಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಕೈವಾಡವಿದೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಕೆಂಪು ಕೋಟೆ ಕಾರು ಸ್ಫೋಟ ಮತ್ತು ಫರಿದಾಬಾದ್ ಮಾಡ್ಯೂಲ್‌ಗೆ ಸಹಾಯ ಮಾಡುವಲ್ಲಿ ಮತ್ತು ಅವರಿಗೆ ಹಣಕಾಸು ಒದಗಿಸುವಲ್ಲಿ ಓರ್ವ ಮಹಿಳಾ ವೈದ್ಯರ ಪಾತ್ರ ಇದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಜೈಶ್ ಮಹಿಳಾ ವಿಂಗ್‌ನ ಭಾರತದ ನಾಯಕಿ, ವೈದ್ಯೆಯಾಗಿರುವ ಶಾಹಿನಾ ಶಾಹಿದ್ ಬಂಧಿಸಿದ್ದಾರೆ. ಸೋಮವಾರ ಜಮ್ಮು ಕಾಶ್ಮೀರ ಮತ್ತು ಫರೀದಾಬಾದ್ ಪೊಲೀಸರು ಜಂಟಿ ಕಾರ್ಯಾಚರಣೆ ವೇಳೆ 2,900 ಕೆ.ಜಿ ಸ್ಫೋಟಕಗಳನ್ನು ಪತ್ತೆ ಹಚ್ಚಿ, ಎಂಟು ಜನರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಇದೀಗ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ವೈದ್ಯೆ ಶಾಹಿನಾ ಕಾರಿನಲ್ಲಿ ರೈಫಲ್, ಮದ್ದುಗುಂಡುಗಳು ಪತ್ತೆಯಾಗಿವೆ.
ಬಂಧಿತ ವೈದ್ಯೆ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಕೂಡ ಆರೋಪಿತೆಗೆ ವಹಿಸಲಾಗಿತ್ತು.
ಜೊತೆಗೆ ಸಾದಿಯಾ ಅಜರ್ ಪತಿ ಯೂಸುಫ್ ಅಜರ್ 1996ರ ಕಂದಹಾರ್ ಹೈಜಾಕ್‌ನ ಸೂತ್ರಧಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಶಾಹಿನಾ ಶಾಹಿದ್ ಲಕ್ನೋದ ಲಾಲ್‌ಬಾಗ್ ನಿವಾಸಿಯಾಗಿದ್ದು, ಬಂಧಿತ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.


