ದೆಹಲಿ ಕಾರು ಸ್ಫೋಟ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್

0
Spread the love

ಬೆಂಗಳೂರು: ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ದೇಶದ ಐಕ್ಯತೆ, ಸಮಗ್ರತೆ, ಶಾಂತಿ ರಕ್ಷಣೆಗೆ ನಾವು ಉಗ್ರ ಚಟುವಟಿಕೆಗಳ ವಿರುದ್ದ ಬಹಳ ಜಾಗರೂಕರಾಗಿ ಇರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

Advertisement

ಸೋಮವಾರ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿರುವ ಕಾರು ಸ್ಫೋಟ ಪ್ರಕರಣದ ಬಗ್ಗೆ ಕೇಳಿದಾಗ, “ದೆಹಲಿಯಲ್ಲಾಗಲಿ ಅಥವಾ ಬೇರೆ ಎಲ್ಲೇ ಆಗಲಿ ನಾವು ಎಚ್ಚರಿಕೆಯಿಂದ ಇರಬೇಕು. ಕರ್ನಾಟಕ ರಾಜ್ಯದ ಭದ್ರತೆ ಬಗ್ಗೆ ಗೃಹ ಸಚಿವರು ಪರಿಶೀಲಿಸುತ್ತಿದ್ದು,

ಭದ್ರತೆ ಹೆಚ್ಚಳದ ಬಗ್ಗೆ ಸಿಎಂ ಆದೇಶ ನೀಡಿದ್ದಾರೆ. ಇಡೀ ದೇಶದಲ್ಲಿ ನಾವು ಶಾಂತಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ಸ್ಫೋಟದ ಹಿಂದಿರುವ ಉಗ್ರರಿಗೆ ಶಿಕ್ಷೆ ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ” ಎಂದು ತಿಳಿಸಿದರು.

ಆರೋಪ ಮಾಡುವ ಸಮಯ ಇದಲ್ಲ

ಪುಲ್ವಾಮಾ ಘಟನೆ ನಂತರ ಎಚ್ಚೆತ್ತುಕೊಂಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಇದು ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, “ಈ ವಿಚಾರದಲ್ಲಿ ಬೇರೆಯವರ ಮೇಲೆ ಆರೋಪ ಮಾಡುವುದಿಲ್ಲ. ಆರೋಪ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಜನಸಾಮಾನ್ಯರನ್ನು ರಕ್ಷಿಸಿ, ಸರ್ಕಾರದ ಗೌರವ ಉಳಿಸಿಕೊಳ್ಳುವುದೇ ಪರಿಹಾರ. ಸೂಕ್ತ ಸಮಯ ಬಂದಾಗ ನಾವು ಆರೋಪ ಮಾಡುತ್ತೇವೆ. ಈಗ ನಾವು ಆರೋಪ ಮಾಡುವುದಕ್ಕಿಂತ ಜಾಗೃತಿ ಮೂಡಿಸಿ, ಜೀವ, ಜೀವನ ಉಳಿಸಲು ಪ್ರಯತ್ನಿಸಬೇಕು” ಎಂದರು.

ಕಲಾಲೋಕ ಮಾರಾಟ ಮಳಿಗೆ ಉದ್ಘಾಟನೆ ಬಗ್ಗೆ ಕೇಳಿದಾಗ, “ರಾಜ್ಯದಲ್ಲಿ ತಯಾರಿಸುವ ಉತ್ಪನ್ನಗಳಾದ ಚನ್ನಪಟ್ಟಣ ಗೊಂಬೆ, ಬಿದಿರು ಕಲಾಕೃತಿ, ಶ್ರೀಗಂಧದ ಕಲಾಕೃತಿ, ಮೈಸೂರು ರೇಷ್ಮೆ, ಕರಕುಶಲ ವಸ್ತು, ಸಾಬೂನು, ಕೈಮಗ್ಗ, ಕಾಫಿ ಉತ್ಪನ್ನಗಳ ಮಳಿಗೆ ಆರಂಭಿಸಲು ನಾವು ಸೂಚಿಸಿದ್ದೆವು.

ಅದರಂತೆ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳಿಗೆ ಆರಂಭಿಸಲಾಗಿದೆ. ಹೊರ ರಾಜ್ಯ ಹಾಗೂ ದೇಶಗಳಿಂದ ಬರುವ ಜನರಿಗೆ ನಮ್ಮ ರಾಜ್ಯದ ಉತ್ಪನ್ನಗಳನ್ನು ಪರಿಚಯಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ” ಎಂದು ತಿಳಿಸಿದರು. ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ಮತ ಕಳ್ಳತನ ವಿರುದ್ಧ ನಡೆಸಿದ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಸಲ್ಲಿಸಲು ಹೋಗಿದ್ದೆ. ಅವುಗಳನ್ನು ಸಲ್ಲಿಸಿ ಬಂದಿದ್ದು, ಇನ್ನಷ್ಟು ದಾಖಲೆಗಳಿವೆ ಅವುಗಳನ್ನೂ ತಲುಪಿಸುತ್ತೇವೆ” ಎಂದರು.


Spread the love

LEAVE A REPLY

Please enter your comment!
Please enter your name here