ಧರ್ಮಸ್ಥಳ ಕೇಸ್: ಯೂಟ್ಯೂಬರ್ ಸಮೀರ್ ಪ್ರಕರಣದ ವಿಚಾರಣೆ ಧಾರವಾಡ ಪೀಠಕ್ಕೆ ವರ್ಗಾವಣೆ

0
Spread the love

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ವಿಡಿಯೋ ಪೋಸ್ಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ಬಳ್ಳಾರಿಯ ಕೌಲ್‌ ಬಜಾರ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಿ, ಹೈಕೋರ್ಟ್​ನ ಬೆಂಗಳೂರು ಪೀಠ ಆದೇಶಿಸಿದೆ.

Advertisement

ಬೆಂಗಳೂರಿನ ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕ ಸದಸ್ಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರ ಸಮೀರ್‌ ಪರ ವಕೀಲರು, ಬಳ್ಳಾರಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ.

ಆದರೆ, ಎಫ್‌ಐಆರ್‌ಗೆ ತಡೆ ನೀಡಿ ಮಧ್ಯಂತರ ರಕ್ಷಣೆ ಒದಗಿಸಿರುವುದನ್ನು ಮುಂದುವರಿಸಬೇಕು ಎಂದು ಕೋರಿದರು. ಅದಕ್ಕೆ ಆಕ್ಷೇಪಿಸಿದ ಸರಕಾರಿ ವಕೀಲರು, ”ಬೇರೆ ಪೀಠಕ್ಕೆ ಅರ್ಜಿ ವರ್ಗಾವಣೆ ಮಾಡಲಾಗದು. ಧಾರವಾಡ ಪೀಠದಲ್ಲಿ ಹೊಸದಾಗಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಮಧ್ಯಂತರ ಪರಿಹಾರ ಮುಂದುವರಿಸಬಾರದು” ಎಂದು ಕೋರಿದರು.

ಇದಕ್ಕೆ ಪೀಠ, ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮತ್ತೊಂದು ಪೀಠ, ಎಫ್‌ಐಆರ್‌ಗೆ ತಡೆ ನೀಡಿದೆ. ಸರ್ಕಾರವು ಮಧ್ಯಂತರ ಆದೇಶ ತೆರವಿಗೆ ಅರ್ಜಿ ಸಲ್ಲಿಸಿದೆ. ವ್ಯಾಪ್ತಿಯ ವಿಚಾರ ಇರುವುದರಿಂದ ಈ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಹಲವು ಪ್ರಕರಣಗಳನ್ನು ಹಾಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ, ಅರ್ಜಿದಾರರು ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿ ವಿಚಾರಣೆ ಮುಂದೂಡಿತು.

ಏನಿದು ಪ್ರಕರಣ?

 ಸಮೀರ್‌ ಎಂ.ಡಿ ಧರ್ಮಸ್ಥಳದ ವಿದ್ಯಾರ್ಥಿನಿ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವಿಡಿಯೋ ಮಾಡಿದ್ದರು. ಯೂಟ್ಯೂಬ್‌ನಲ್ಲಿ ಧೂತ ಸಮೀರ್‌ ಎಂಡಿ ಹೆಸರಿನ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಇದನ್ನು ಪೋಸ್ಟ್‌ ಮಾಡಿದ್ದರು. ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಳ್ಳಾರಿ ಜಿಲ್ಲೆಯ ಕೌಲ್‌ ಬಜಾರ್‌ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here