ಲಖನೌ: ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟದಲ್ಲಿ ಕನಿಷ್ಠ 12 ಜನ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂಬ ಸ್ಫೋಟಕ ಅಂಶ ಬಯಲಾಗಿದೆ.
ಅದಲ್ಲದೆ ವೈದ್ಯೆಗೆ ಉಗ್ರ ಮಸೂದ್ ಅಜರ್ ಸಹೋದರಿ ಜತೆ ನಂಟಿತ್ತು ಎಂಬುದು ತಿಳಿದುಬಂದಿದೆ. ಇವೆರಲ್ಲರೂ ಸೇರಿ ಮಹಿಳಾ ಉಗ್ರ ಪಡೆಗಳನ್ನು ಕಟ್ಟಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಲಕ್ನೋ ಮೂಲದ ಡಾಕ್ಟರ್ ಶಾಹೀನ್ ಶಾಹಿಸ್, ಕಾರಿನಲ್ಲಿ ಎಕೆ-47 ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಆಕೆಯ ವಿಚಾರಣೆ ವೇಳೆ, ಮೋಸ್ಟ್ ವಾಂಟೆಡ್ ಉಗ್ರ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ಜೊತೆ ನಂಟು ಇರುವುದು ಬಯಲಾಗಿದೆ.
ಸಾದಿಯಾ ಅಜರ್ ಜಮಾತ್ ಉಲ್ ಮುನಾಯತ್ ಎಂಬ ಜೈಶ್ ಉಗ್ರರ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದು, ಭಾರತದಲ್ಲಿ ಮಹಿಳಾ ಭಯೋತ್ಪಾದಕರ ಸಂಘಟನೆಯನ್ನು ಕಟ್ಟುವ ಹೊಣೆಯನ್ನು ಶಾಹಿನ್ಗೆಗೆ ವಹಿಸಿದ್ದರು. ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಬಹವಲ್‌ಪುರದಲ್ಲಿರುವ ಮಸೂದ್ ಅಜರ್‌ನ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಮಸೂದ್ ಅಜರ್ ಕುಟುಂಬದ ಹತ್ತು ಮಂದಿ ಮೃತಪಟ್ಟಿದ್ದರು, ಅದರಲ್ಲಿ ಸಾದಿಯಾ ಅಜರ್‌ನ ಪತಿ ಯೂಸೆಫ್ ಅಜರ್ ಕೂಡ ಸೇರಿದ್ದ.
ವೈದ್ಯೆ ಶಹೀನ್ ಶಾಹಿದ್ ಲಕ್ನೋದ ಲಾಲ್ ಬಾಗ್ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫರಿದಾಬಾದ್‌ನಲ್ಲಿ ಜೆಇಎಂನ ಭಯೋತ್ಪಾದನಾ ಮಾಡ್ಯೂಲ್ ಅನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಅವರ ಕಾರಿನಿಂದ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು. ಅಸಾಲ್ಟ್ ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಿದ ಕಾರು ಶಾಹೀನ್ ಶಾಹಿದ್‌ಗೆ ಸೇರಿದೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.


