ಕಾಲ್ತುಳಿತದ ಘಟನೆಯಿಂದಾಗಿ 2026ರ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಲಾಗಿದೆ. ಬಿಸಿಸಿಐನ ಈ ಆಘಾತಕಾರಿ ನಿರ್ಧಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಆರ್‌ಸಿಬಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಹೌದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಟಿ20 ಲೀಗ್‌ಗಳಲ್ಲಿ ಒಂದಾಗಿದೆ.
ಈ ಪಂದ್ಯದ ಭಾಗವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದ್ರೆ ಮುಂಬರುವ ಐಪಿಏಲ್ ಆವೃತ್ತಿಯಲ್ಲಿ RCBಯ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಆರ್ ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಹೊರಗಡೆ ಸ್ಥಳಾಂತರ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಇದರ ಮರು ದಿನವೇ ಬೆಂಗಳೂರಿನ ಫ್ಯಾನ್ಸ್ ಜತೆ ಸಂಭ್ರಮಾಚರಣೆ ಮಾಡಲು ಮುಂದಾದ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿತ್ತು. ಚಾಂಪಿಯನ್ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಈ ವೇಳೆ ಸಂಭವಿಸಿದ ಆಕಸ್ಮಿಕ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದರು.
ಈ ಘಟನೆ ಬಳಿಕ ಯಾವುದೇ ಕಾರ್ಯಕ್ರಮ ನಡೆಸಲು ಈ ಕ್ರೀಡಾಂಗಣ ಅಸುರಕ್ಷಿತ ಎಂದು ಘೋಷಿಸಲಾಗಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಪಂದ್ಯಗಳನ್ನು ಆಡಿಸಲು ಅನುಮತಿ ಇಲ್ಲ. ಚಿನ್ನಸ್ನಾಮಿಯನ್ನು ಹೊರತುಪಡಿಸಿದರೆ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ, ಸಕಲ ವ್ಯವಸ್ಥೆ ಇರುವ ಮತ್ತೊಂದು ಕ್ರಿಕೆಟ್ ಕ್ರೀಡಾಂಗಣ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲೇ ಮತ್ತೆಲ್ಲೂ ಇಲ್ಲ. ಹೀಗಾಗಿ ಆರ್ ಸಿಬಿ ತನ್ನ ತವರು ಕ್ರೀಡಾಂಗಣವನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಓಪನ್ ಆಫರ್ ನೀಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಪುಣೆಯಲ್ಲಿರುವ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಅನ್ನು ತಮ್ಮ ಹೋಮ್ ಗ್ರೌಂಡ್ ಮಾಡಿಕೊಳ್ಳಲು ಆಫರ್ ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಆರ್‌ಸಿಬಿ ಹಾಗೂ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.


