ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ ಕರ್ನಾಟಕ ಹೈಕೋರ್ಟ್ನಿಂದ ಹಿನ್ನಡೆಯಾಗಿದ್ದು, ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿ, ಸಮನ್ಸ್ ಜಾರಿ ಮಾಡಿದ್ದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ತ್ವರಿತ ನ್ಯಾಯಾಲಯದ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದ್ದು,
ಈ ಬಗ್ಗೆ ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಅಗತ್ಯವಿಲ್ಲದಿದ್ದಾಗ ಖುದ್ದು ಹಾಜರಿಯಿಂದ ವಿನಾಯಿತಿಗೆ ಬಿಎಸ್ವೈ ಖುದ್ದು ಅರ್ಜಿ ಸಲ್ಲಿಸಬಹುದು ಎಂದಿರುವ ಕೋರ್ಟ್ ಅಂತಹ ಮನವಿಯನ್ನು ಪರಿಗಣಿಸಲು ತ್ವರಿತ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ಪ್ರಭಾವಕ್ಕೆ ಒಳಗಾಗದೇ ತನ್ನ ಮುಂದೆ ಇರುವ ಸಾಕ್ಷಿಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಪ್ರಕರಣ ನಿರ್ಧರಿಸಬೇಕು. ಪ್ರಮುಖವಾಗಿ ಹೈಕೋರ್ಟ್ ಮತ್ತು ಸಕ್ಷಮ ನ್ಯಾಯಾಲಯ ಮಾಡಿರುವ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಪ್ರಭಾವಕ್ಕೆ ಒಳಗಾಗದೇ ಸಾಕ್ಷಿಯನ್ನು ಪರಿಗಣಿಸಬೇಕು ಎಂದು ಹೇಳಿದರು.
ಆರೋಪ ಮುಕ್ತಿ ಸೇರಿಯೂ ಯಾವುದೇ ಅರ್ಜಿಗಳನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ. ಈ ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ ಎಂದ ಹೈಕೋರ್ಟ್ ತಿಳಿಸಿದೆ.


