ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಕೊಲೆಯಾಗಿದ್ದು, ಸೋದರ ಮಾವನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂದ್ರಹಳ್ಳಿ ಸಮೀಪದ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.
ವೆಂಕಟೇಶ್(65) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಮತ್ತು ಆಕೆಯ ಸೋದರ ಮಾವ ಸೇರಿ ಕೊಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಈ ಘಟನೆ ಸಂಬಂಧ ಪತ್ನಿ ಪಾರ್ವತಿ ಮತ್ತು ಆಕೆಯ ಸೋದರ ಮಾವ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ವೆಂಕಟೇಶ್, ಮಂಜುನಾಥ ಬಡಾವಣೆಯಲ್ಲಿ ಕಳೆದ 30 ವರ್ಷಗಳಿಂದ ವಾಸವಿದ್ದ. ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟೇಶ್, ಹತ್ತು ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ಟಿದ್ದರು. ಆರು ವರ್ಷಗಳ ಹಿಂದೆ ಪಾರ್ವತಿ ಎಂಬಾಕೆಯನ್ನ ಎರಡನೇ ಮದುವೆಯಾಗಿದ್ದರು.
ಇತ್ತೀಚೆಗೆ, ಪಾರ್ವತಿ ವೆಂಕಟೇಶ್ರ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಅಥವಾ ಆರು ಲಕ್ಷ ರೂಪಾಯಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ವೆಂಕಟೇಶ್ ಇದಕ್ಕೆ ಒಪ್ಪದೆ, 2.5 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಇದೇ ವಿಚಾರಕ್ಕೆ ನಿನ್ನೆ ಗಂಡ-ಹೆಂಡತಿಯ ನಡುವೆ ತೀವ್ರ ಜಗಳ ನಡೆದಿತ್ತು.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಜಗಳ ತಾರಕಕ್ಕೇರಿದ್ದು, ಪಾರ್ವತಿ ತನ್ನ ಸೋದರ ಮಾವ ರಂಗಸ್ವಾಮಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ, ವೆಂಕಟೇಶ್ ಪಾರ್ವತಿಯನ್ನು ಮನೆಯಿಂದ ಹೊರಗೆ ಎಳೆದು ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ರಂಗಸ್ವಾಮಿ ಮತ್ತು ಪಾರ್ವತಿ ಸೇರಿ ವೆಂಕಟೇಶ್ರನ್ನು ಮೆಟ್ಟಿಲುಗಳ ಮೇಲಿಂದ ತಳ್ಳಿದ್ದಾರೆ.
ಕೆಳಗೆ ಬಿದ್ದ ವೆಂಕಟೇಶ್ಗೆ ತಲೆಗೆ ತೀವ್ರ ಪೆಟ್ಟಾಗಿದ್ದರೂ, ಅವರ ಮೇಲೆ ಹಲ್ಲೆ ಮುಂದುವರಿಸಿದ್ದಾರೆ. ಪರಿಣಾಮ, ತಲೆಗೆ ತೀವ್ರ ಪೆಟ್ಟಾಗಿದ್ದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ, ಈ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.



